ಮನೆ ರಾಜ್ಯ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ: ರಮೇಶ್ ಜಿಗಜಿಣಗಿ

ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ: ರಮೇಶ್ ಜಿಗಜಿಣಗಿ

0

ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಎಂದು ಕ್ಷೇತ್ರದ ಹಾಲಿ ಸಂಸದ ರಮೇಶ್ ಜಿಗಜಿಣಗಿ ಎಂದು ಘೋಷಿಸಿದ್ದಾರೆ.

ಈ ಬಾರಿ ಬಿಜೆಪಿ ವಿಜಯಪುರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರ ಕೇಂದ್ರ ರೆಲ್ವೆ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಂದಾಜು ಒಂದು ಲಕ್ಷ ಕೋಟಿ ಅನುದಾನ ವಿಜಯಪುರ ಕ್ಷೇತ್ರಕ್ಕೆ ತಂದಿದ್ದೇನೆ. ಎಸ್ ​ಸಿ ಮೀಸಲು ವಿಜಯಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ. ಈ ಬಗ್ಗೆ ಪಕ್ಷದಿಂದ ಸೂಚನೆ ಬಂದಿದೆ. ಮೈತ್ರಿ ಹಿನ್ನೆಲೆ ವಿಜಯಪುರವನ್ನ ಜೆಡಿಎಸ್ ​​ನವರೂ ಕೇಳುತ್ತಾರೆ. ಆದರೆ, ನಮ್ಮವರು ಯಾವ ಕಾಲಕ್ಕೂ ಕ್ಷೇತ್ರ ಬಿಟ್ಟುಕೊಡುವುದಿಲ್ಲ. ನನಗೆ ಈ ಭಾಗದ ಜನ ವೋಟ್ ಹಾಕುತ್ತಾರೆ ಅನ್ನೋ ವಿಶ್ವಾಸವಿದೆ ಎಂದರು. ಅಲ್ಲದೆ, ಒಂದು ವೇಳೆ ಕ್ಷೇತ್ರವನ್ನು ಜೆಡಿಎಸ್ ​ಗೆ ಬಿಟ್ಟುಕೊಟ್ಟರೆ ಪ್ರಚಾರ ಮಾಡುತ್ತೇನೆ ಎಂದರು.

 ರಮೇಶ್ ಜಿಗಜಿಣಗಿ ಆಸ್ತಿಯಲ್ಲಿ ಬಾರೀ ಏರಿಕೆಯಾಗಿದೆ. 2004 ರಲ್ಲಿ 54.80 ಲಕ್ಷ ರೂಪಾಯಿ ಇದ್ದ ಆಸ್ತಿ 2019 ರ ವೇಳೆಗೆ 50.41 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಮೇಶ್ ಜಿಗಜಿಣಗಿ, ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕಿಂತ ಆಸ್ತಿ ಹೆಚ್ಚಿದೆ. ನೀವು ಮಾಧ್ಯಮದವರು ದಡ್ಡರು, ಆಸ್ತಿ ವಿವರ ಬಹಳ ಕಡಿಮೆ ಬರೆದಿದ್ದೀರಿ. ನಿಮ್ಮ ಮನೆ ಮೂರು ಸಾವಿರಕ್ಕೆ ತಗೊಂಡಿದ್ದೀರಿ, ಈಗ ಅದು ಒಂದೂವರೆ ಕೋಟಿ ಆಗಿದೆ. ಹೀಗೆ ನನ್ನ ಆಸ್ತಿಯಲ್ಲಿ ಹೆಚ್ಚಳವಾಗಿದೆ ಎಂದರು.

ಅಲ್ಲದೆ, ಇವರ ಅಜ್ಜ ಕೊಟ್ಟಿದ್ದಾನಾ? ಎಲ್ಲಿಯಾದರೂ ರೋಡ್ ಕೆದರಿ ನಾನು ಆಸ್ತಿ ಮಾಡಿದ್ದೇನಾ? ಎಲ್ಲಿಯಾದರೂ ಲಂಚ ಪಡೆದಿದ್ದೇನಾ? ನನ್ನ ಹಾಗೂ ಮಕ್ಕಳ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿ ಇದು. ಯಾರಪ್ಪನದು ಇದರಲ್ಲಿ ಹಂಚಿಕೆ ಇಲ್ಲ. ನಾನು ಹೇಗೆ ಇದ್ದೇನೆ ಅಂದರೆ ನಗರದ ಗಾಂಧಿ ಚೌಕ್​ನಲ್ಲಿ ಅಜ್ಜ ಹೇಗೆ ಅಂಗಿ ಕಳೆದು ಕುಳಿತಿದ್ದಾನೋ ಹಾಗೆ ನಾನು ಇದ್ದೇನೆ. ಬೇಕಾದವರು ಬರಲಿ ಎಂದು ವಿರೋಧಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟರು.

ನನ್ನ 150 ಎಕರೆ ಜಮೀನು ನಗರ ಪ್ರದೇಶ ವ್ಯಾಪ್ತಿಯಲ್ಲಿ ಬಂದಿದೆ. ನಾನು ಅದನ್ನು ತೆಗೆದುಕೊಂಡ ಸಮಯದಲ್ಲಿದ್ದ ದರ ಈಗ ಭಾರೀ ಏರಿಕೆಯಾಗಿದೆ. ಆದ್ದರಿಂದ ನನ್ನ ಆಸ್ತಿ ಬೆಲೆಯೂ ಸಹ ಹೆಚ್ಚಾಗಿದೆ ಎಂದು ಸ್ಪಷ್ಟನೆ ನೀಡಿದರು.