ಮನೆ ರಾಜಕೀಯ ನನಗೆ ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತದೆ: ಸುಮಲತಾ ಅಂಬರೀಶ್

ನನಗೆ ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತದೆ: ಸುಮಲತಾ ಅಂಬರೀಶ್

0

ಮಂಡ್ಯ:ನನಗೆ ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತದೆ,ಅದರಲ್ಲಿ ಅನುಮಾನವಿಲ್ಲ.ಆದರೆ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬುದು ನನ್ನ ಹೋರಾಟ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಮೈತ್ರಿಯಾದ ತಕ್ಷಣ ನನ್ನ ಜೊತೆ ಶತ್ರುತ್ವ ಬೆಳೆಯಬೇಕು ಎಂದೇನೂ ಇಲ್ಲ.ಜೆಡಿಎಸ್ ಈಗ ಎನ್‍ಡಿಎ ಭಾಗವಾಗಿದೆ. ನಾನೂ ಕೂಡ ಎನ್‍ಡಿಎ ಭಾಗವಾಗಿದ್ದೇನೆ ಎಂದರು.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಬಹಳಷ್ಟು ಮಂದಿ ನೀವು ಮಂಡ್ಯ ಬಿಟ್ಟು ಹೋಗಬೇಡಿ, ನಾವು ನಿಮ್ಮನ್ನು ನಂಬಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಬಿಜೆಪಿ ನನಗೆ ಟಿಕೆಟ್ ನೀಡುವುದು ಖಚಿತ. ಮಂಡ್ಯ ಕ್ಷೇತ್ರದಲ್ಲೇ ಬಿಜೆಪಿ ಟಿಕೆಟ್ ಸಿಗಬೇಕು ಎನ್ನುವುದು ನನ್ನ ಆಶಯ. ಈ ಬಗ್ಗೆ ಹೈಕಮಾಂಡ್ ನಾಯಕರಿಗೂ ನಾನು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.
ಕಳೆದ ಒಂದು ವರ್ಷದಿಂದಲೂ ಸಂಸದೆಯಾಗಿ ನಾನು ಬಿಜೆಪಿಗೆ ಸಂಸತ್‍ನಲ್ಲಿ ಎಲ್ಲಾ ಹಂತದಲ್ಲೂ ಬೆಂಬಲ ನೀಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲೂ ಬಾಹ್ಯ ಬೆಂಬಲ ವ್ಯಕ್ತಪಡಿಸಿದ್ದೇನೆ. ಜನರ ಅಭಿಪ್ರಾಯ ಕೂಡ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡರೆ ಪಕ್ಷ ಸಂಘಟನೆ ಬಲಗೊಳ್ಳುತ್ತದೆ ಎಂಬುದಾಗಿದೆ ಎಂದರು.
ನನಗೆ ಬಿಜೆಪಿ ಟಿಕೆಟ್ ಸಿಕ್ಕರೆ ಜೆಡಿಎಸ್‍ನವರು ಮೈತ್ರಿ ಧರ್ಮದ ಭಾಗವಾಗಿ ನನಗೆ ಬೆಂಬಲ ನೀಡಿಯೇ ನೀಡುತ್ತಾರೆ. ನಾನು ಕೂಡ ಅವರ ಬೆಂಬಲ ಕೇಳುತ್ತೇನೆ ಎಂದು ಹೇಳಿದರು.
ಬೇರೆ ಕ್ಷೇತ್ರದಲ್ಲಿದ್ದಂತೆ ಮಂಡ್ಯದಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿಲ್ಲ. ಈ ಎಲ್ಲಾ ಅಂಶಗಳನ್ನೂ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಜೆಡಿಎಸ್‍ನವರು ತಮ್ಮ ಸಂಘಟನಾ ದೃಷ್ಟಿಯಿಂದ ಯೋಚಿಸುವುದು ಸಹಜ. ಹಿರಿಯ ನಾಯಕರು ತಮ್ಮ ಅನುಭವದ ಆಧಾರದ ಮೇಲೆ ಎಲ್ಲವನ್ನೂ ಚರ್ಚಿಸಿ ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಹೊಸ ಸಂಸತ್‍ನಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಬಿಜೆಪಿ ಸರ್ಕಾರ ಅಂಗೀಕರಿಸಿದೆ. ಹೀಗಾಗಿ ಎಲ್ಲೆಲ್ಲಿ ಅವಕಾಶ ಲಭ್ಯವಿದೆಯೋ ಅಲ್ಲಿ ಮಹಿಳೆಯರಿಗೆ ಅವಕಾಶ ನೀಡಲು ವರಿಷ್ಠರು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಬೆಂಬಲ ನೀಡುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕೇಳಿದ್ದೇನೆ. ಅವರ ಕ್ಷೇತ್ರಕ್ಕೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಪುಟ್ಟಣ್ಣಯ್ಯ ಅವರ ಮೇಲೆ ಅಪಾರ ಗೌರವವಿದೆ. ಪಾಂಡವಪುರದಲ್ಲಿ ನಾನು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲಿಸಿದ್ದೆ. ಅವರಿಗೂ ಮನಸಾಕ್ಷಿ ಇರಬೇಕು ಅಲ್ವಾ, ಅಕ್ರಮ ಗಣಿಗಾರಿಕೆ ಪರ ನಾನು ಹೋರಾಡಿದ್ದೇನೆ.ಆಗ ರೈತ ಸಂಘದ ಜೊತೆ ನಾನು ನಿಂತಿದ್ದೆ. ಈಗ ನನ್ನನ್ನು ಬೆಂಬಲಿಸಲಿ ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.