ಬೆಂಗಳೂರು: ಬಿಜೆಪಿ ಅಭ್ಯರ್ಥಿ ನಾರಾಯಣ ಭಾಂಡಗೆ ಮತ್ತು ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲುವ ವಿಶ್ವಾಸವಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎನ್ ಡಿಎ ಅಭ್ಯರ್ಥಿ ಗೆಲ್ಲಿಸುವ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಲ್ಲ ಶಾಸಕರೊಂದಿಗೆ ಮಾತನಾಡಿದ್ದಾರೆ. ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಬಿಜೆಪಿ ಶಾಸಕ, ಚುನಾವಣಾ ಏಜೆಂಟ್ ಟಿ.ಸುನೀಲ್ ಕುಮಾರ್ ಮಾತನಾಡಿ, ರಾಜ್ಯಸಭಾ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿ ನಾರಾಯಣ ಭಾಂಡಗೆ ಅವರಿಗೆ ನಮ್ಮ ಶಾಸಕರು ಮತ ಚಲಾಯಿಸುತ್ತಾರೆ ಎಂದು ತಿಳಿಸಿದರು.
ಹೆಚ್ಚುವರಿ ಮತಗಳನ್ನು ಎನ್ಡಿಎ ಅಭ್ಯರ್ಥಿಗೆ ವರ್ಗಾಯಿಸಲಾಗುತ್ತದೆ. ಬಿಜೆಪಿ ಎಲ್ಲ ಶಾಸಕರು ಮಧ್ಯಾಹ್ನ 12 ಗಂಟೆ ಒಳಗೆ ಪೂರ್ಣವಾಗಿ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ. ನಮಗೆ 45 ಮತಗಳು ಗೆಲ್ಲಲು ಬೇಕಾಗುತ್ತದೆ. ಬಿಜೆಪಿಯಿಂದ ಯಾವುದೇ ಅಡ್ಡ ಮತದಾನ ಆಗುವುದಿಲ್ಲ ಎಂದರು.
ಎನ್ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮಾತನಾಡಿ, ದುಡ್ಡು ಕೊಟ್ಟು ಕೊಂಡುಕೊಳ್ಳುವ ಮತಗಳನ್ನು ಕೇಳಿಲ್ಲ. ವಿಶ್ವಾಸದ ಮತಗಳನ್ನು ಕೇಳಿದ್ದೇನೆ. ಆ ಪಕ್ಷ ಈ ಪಕ್ಷ ಅಂತ ಕೇಳಿಲ್ಲ. ಎಲ್ಲ ಪಕ್ಷದವರನ್ನು ಮತ ಕೇಳಿದ್ದೇನೆ. ವಿಶ್ವಾಸದ ಮತಗಳಲ್ಲಿ ನನಗೆ ನಂಬಿಕೆ ಇದೆ. ಕಾಂಗ್ರೆಸ್ನವರು ಹೊಸ ಸಿಸ್ಟಮ್ ಅನ್ನು ತಂದಿದ್ದಾರೆ. ಬೆದರಿಕೆ ಹಾಕಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು ಎಂದು ಹೇಳಿದರು.
ಬೆಳಗ್ಗೆ 9 ಗಂಟೆಯಿಂದ ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ.