ಮನೆ ಕಾನೂನು ಮೃತ ತಂದೆಯ ನೌಕರಿಯನ್ನು ವಿವಾಹಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ನೀಡಲಾಗದು: ಹೈಕೋರ್ಟ್

ಮೃತ ತಂದೆಯ ನೌಕರಿಯನ್ನು ವಿವಾಹಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ನೀಡಲಾಗದು: ಹೈಕೋರ್ಟ್

0

ಬೆಂಗಳೂರು: ಬ್ಯಾಂಕ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆ ನಿಧನರಾದ ಬಳಿಕ ಆ ಹುದ್ದೆಯನ್ನು ತನಗೆ ನೀಡಬೇಕು ಎಂದು ಕೋರಿ ವಿವಾಹಿತ ಪುತ್ರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಅನುಕಂಪದ ಆಧಾರದ ಮೇಲೆ ತನಗೆ ಉದ್ಯೋಗ ನೀಡಲು ನಿರಾಕರಿಸಿದ್ದ ಕೆನರಾ ಬ್ಯಾಂಕ್​ ಕ್ರಮವನ್ನು ಪ್ರಶ್ನಿಸಿ ವಿವಾಹಿತ ಮಹಿಳೆ ಕೆ.ಲಕ್ಷ್ಮಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದುಮ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಈ ಸಂದರ್ಭದಲ್ಲಿ, ಮೃತರ ಕುಟುಂಬ ಉದ್ಯೋಗದಾತರಾಗಿದ್ದ ಬ್ಯಾಂಕ್​ನಿಂದ ಮಾಸಿಕ ಪಿಂಚಣಿ ಸೇರಿ ಸಾಕಷ್ಟು ಪರಿಹಾರ ಪಡೆದಿದ್ದಾರೆ. ಹೀಗಾಗಿ ವಿವಾಹಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗದು ಎಂದು ತಿಳಿಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಉದ್ಯೋಗದಾತರಿಂದ ನೀಡಲಾಗಿರುವ ಪ್ರಯೋಜನಗಳು ಸಾಮಾನ್ಯವಾಗಿ ಕುಟುಂಬಕ್ಕೆ ಆರ್ಥಿಕ ಭದ್ರತೆಯ ಒದಗಿಸುವ ಉದ್ದೇಶ ಹೊಂದಿದೆ. ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದು ಕುಟುಂಬವು ಎದುರಿಸುತ್ತಿರುವ ತಕ್ಷಣದ ಆರ್ಥಿಕ ಬಿಕ್ಕಟ್ಟು ಪರಿಹರಿಸುವಲ್ಲಿ ಅನುಕೂಲವಾಗುವ ಹೊರತಾಗಿ ಉತ್ತರಾಧಿಕಾರಿಗಳಿಗೆ ಉದ್ಯೋಗ ಕಲ್ಪಿಸುವ ನೆಪಕ್ಕೆ ಅಲ್ಲ ಎಂದು ಪೀಠ ಹೇಳಿದೆ.

ಅಲ್ಲದೇ, ಮಾಸಿಕ ಕುಟುಂಬ ಪಿಂಚಣಿ ಮೃತರ ಆದಾಯದ ನಷ್ಟದ ನಂತರ ಕುಟುಂಬಕ್ಕೆ ನಿರಂತರ ಆರ್ಥಿಕ ನೆರವು ನೀಡುವ ಆಕಾಂಕ್ಷೆ ಹೊಂದಿದೆ. ಪ್ರಸ್ತುತ ಪ್ರಕರಣದಲ್ಲಿ ನಿವೃತ್ತಿ ಸೌಲಭ್ಯಗಳು ಸ್ವೀಕೃತಿ ಹಾಗೂ ಮಾಸಿಕ ಪಿಂಚಣಿ ಸ್ವರೂಪವನ್ನು ಗಮನಿಸಿದರೆ, ಸತ್ತವರ ಕುಟುಂಬದ ಆರ್ಥಿಕ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ನಿವೃತ್ತಿ ಸೌಲಭ್ಯಗಳು ಮತ್ತು ಪಿಂಚಣಿಗಳ ಸ್ವೀಕೃತಿಯು ಅನುಕಂಪದ ನೇಮಕಾತಿಯನ್ನು ನಿರಾಕರಿಸುವ ಆಧಾರವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಸೂಚಿಸಿದೆ. ಆದರೆ ಈ ಪ್ರಕರಣದಲ್ಲಿ ಉದ್ಯೋಗದಾತರು ಅವಲಂಬಿತರಿಗೆ ನೀಡಿದ ಪರಿಹಾರ ಮೊತ್ತ ಅವರ ಆರ್ಥಿಕ ಸ್ಥಿರತೆ ಪರಿಗಣಿಸಿದಲ್ಲಿ ಅನುಕಂಪದ ನೇಮಕಾತಿ ಮೂಲಕ ಹೆಚ್ಚುವರಿ ಬೆಂಬಲದ ಅಗತ್ಯವಿಲ್ಲದೆ ಸಮರ್ಥರಾಗಿ ಜೀವನ ಸಾಗಿಸಬಹುದು ಎನ್ನುವುದು ಖಾತ್ರಿಯಾಗುತ್ತದೆ ಎಂದು ಸೂಚಿಸಿ ಅರ್ಜಿಯನ್ನು ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ: ಕೆನರಾ ಬ್ಯಾಂಕಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಕಾವೇರಪ್ಪ ಎಂಬವರು 2022 ಅ.7ರಂದು ನಿಧನರಾಗಿದ್ದರು. ಉದ್ಯೋಗಿಯಾಗಿದ್ದ ತಂದೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅನುಕಂಪದ ಉದ್ಯೋಗ ನೀಡುವಂತೆ ಮೃತನ ವಿವಾಹಿತ ಪುತ್ರಿ ಕೆ.ಲಕ್ಷ್ಮೀ ಕೆನರಾ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಈಗಾಗಲೇ ವಿವಾಹವಾಗಿದ್ದು, ಪತಿ ಮನೆಯಲ್ಲಿ ವಾಸಿಸುತ್ತಿರುವುದರಿಂದ ಹುದ್ದೆಗೆ ಅನರ್ಹಳು ಎಂದು ತಿಳಿಸಿ ಬ್ಯಾಂಕ್ ಅರ್ಜಿ ತಿರಸ್ಕರಿಸಿತು. ಇದನ್ನು ಪ್ರಶ್ನಿಸಿ ಪುತ್ರಿ ಹೈಕೋರ್ಟ್ ಮೇಟ್ಟಿಲೇರಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿವಾಹಿತ ಮಹಿಳೆಗೆ ಮೂವರು ಹೆಣ್ಣು ಮಕ್ಕಳಿದ್ದು, ಪತಿ ಬೀದಿಬದಿಯ ವ್ಯಾಪಾರಸ್ಥರಾಗಿದ್ದಾರೆ. ಕುಟುಂಬ ಆರ್ಥಿಕವಾಗಿ ಅನುಕೂಲಕರ ಸ್ಥಿತಿಯಲ್ಲಿ ಇಲ್ಲ ಹಾಗಾಗಿ ತಮಗೆ ಉದ್ಯೋಗ ನೀಡುವಂತೆ ಬ್ಯಾಂಕ್‌ಗೆ ನಿರ್ದೇಶಿಸುವಂತೆ ಕೋರಿದ್ದರು.

ಬ್ಯಾಂಕ್​ ಪರ ವಕೀಲರು ಉದ್ಯೋಗದಾತ ಸಂಸ್ಥೆ (ಕೆನರಾ ಬ್ಯಾಂಕ್) ಮೃತರ ಕಟುಂಬಕ್ಕೆ ಈಗಾಗಲೇ ಪಿಎಫ್​, ಗ್ರಾಚ್ಯುಟಿ ಮುಂತಾದ ಎಲ್ಲ ರೀತಿಯ ಸೌಲಭ್ಯಗಳನ್ನು ಸೇರಿ 30 ಲಕ್ಷ ರೂ.ಪಾವತಿಸಿದೆ. ಅಲ್ಲದೇ ಮೃತರ ಪತ್ನಿ ರತ್ನಮ್ಮ ಮಾಸಿಕವಾಗಿ 28,272 ರೂ. ಕುಟುಂಬ ಪಿಂಚಣಿ ಪಡೆಯುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.