ಬೆಂಗಳೂರು: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೊಳಗೊಂಡ ಜಾತಿಗಣತಿ ವರದಿ ವಿಚಾರದಲ್ಲಿ ಮುಂದಿಡಬೇಕಾದ ಹೆಜ್ಜೆ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 43 ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಕ್ಯಾಬಿನೆಟ್ ಸಭೆ ಅಜೆಂಡಾ ಮುಗಿದ ಬಳಿಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಕೊಟ್ಟಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಒಳಗೊಂಡ ಜಾತಿಗಣತಿ ವರದಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಮನವರಿಕೆ ಮಾಡಿದರು.
ಮುಂದಿನ ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ಕ್ಯಾಬಿನೆಟ್ ಸದಸ್ಯರ ಸಲಹೆ ಪಡೆದು ಮುಂದುವರೆಯುವ ಭರವಸೆ ನೀಡಿದ ಸಿಎಂ ಬಿಜೆಪಿ ಮಾಡುವ ಆರೋಪಗಳಿಗೆ ತಿರುಗೇಟು ಕೊಡುವಂತೆ ಸೂಚನೆ ನೀಡಿದರು.
ಇದಕ್ಕೂ ಮುನ್ನ ನಡೆದ ಸಂಪುಟ ಸಭೆಯಲ್ಲಿ ಬರಗಾಲ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಹುಲ್ಲು ಖರೀದಿಸಲು ಎಸ್ಡಿಆರ್ಎಫ್ ಫಂಡ್ನಲ್ಲಿ 20 ಕೋಟಿ ಕೊಡಲು ತೀರ್ಮಾನಿಸಲಾಯಿತು. ಬೆಂಗಳೂರಿನ ಕಾಂಗ್ರೆಸ್ ಶಾಸಕರಿಗೆ ಬಂಪರ್ ಅನುದಾನ ನೀಡಲು ಸಮ್ಮತಿಸಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಕೊಡದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಅನುದಾನ ಕೊಡಲು ಒಪ್ಪಿಗೆ ನೀಡಲಾಯಿತು.
ಬೆಂಗಳೂರು ಸೆಂಟ್ರಲ್ ಕಾಲೇಜು ಹಾಗೂ ಪ್ರಸನ್ನ ಕುಮಾರ್ ಬ್ಲಾಕ್ ನಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕಟ್ಟಡ ಕಟ್ಟಲು 163 ಕೋಟಿ ಕೊಡಲು ಒಪ್ಪಿಗೆ ನೀಡಲಾಯಿತು. ಕೃಷಿ ಭಾಗ್ಯ ಯೋಜನೆ ಜಾರಿ ಮತ್ತು ಕೃಷಿ ಟ್ಯಾಂಕ್ಗಳ ಅಭಿವೃದ್ಧಿಗೆ 100 ಕೋಟಿ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ. 20 ಹವಾ ನಿಯಂತ್ರಿತ ಬಸ್ ಖರೀದಿಗೆ ಒಪ್ಪಿಗೆ ಹಾಗು 20 ಹವಾ ನಿಯಂತ್ರಣ ರಹಿತ ಬಸ್ ಖರೀದಿಗೆ ಒಪ್ಪಿಗೆ ನೀಡಿದ್ದು ಇದಕ್ಕಾಗಿ ಒಟ್ಟು 119 ಕೋಟಿ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿತು.