ಮನೆ ಕಾನೂನು ತನಿಖಾಧಿಕಾರಿಗಳ ಅನುಮಾನಾಸ್ಪದ ಕತೆಗಳನ್ನು ನಂಬಲಾಗದು: ಹೈಕೋರ್ಟ್

ತನಿಖಾಧಿಕಾರಿಗಳ ಅನುಮಾನಾಸ್ಪದ ಕತೆಗಳನ್ನು ನಂಬಲಾಗದು: ಹೈಕೋರ್ಟ್

0

ಬೆಂಗಳೂರು : ತನಿಖಾಧಿಕಾರಿಗಳ (ಪ್ರಾಸಿಕ್ಯೂಷನ್) ಅನುಮಾನಾಸ್ಪದ ಕತೆಗಳನ್ನು ನಂಬಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೊರ್ಟ್, ಬಾಲಕಿಯು ಗರ್ಭಿಣಿಯಾಗಿದ್ದ ಮಾಹಿತಿ ಮುಚ್ಚಿಟ್ಟಿದ್ದ ಆರೋಪಕ್ಕೆ ಗುರಿಯಾಗಿದ್ದ ವೈದ್ಯರೊಬ್ಬರ ವಿರುದ್ಧದ ಆರೋಪಪಟ್ಟಿ ರದ್ದುಪಡಿಸಿ ಆದೇಶಿಸಿದೆ.

ಅಂಕೋಲಾದ ಲತಾ ಕೃಷ್ಣಾರೆಡ್ಡಿ ಮಂಕ್ಳಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ್ ಅವರಿದ್ದ ಧಾರವಾಡ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಅರ್ಜಿದಾರ ವೈದ್ಯರನ್ನು ಪ್ರಕರಣದಿಂದ ಬಿಡುಗಡೆಗೊಳಿಸುವಂತೆ ಸೂಚನೆ ನೀಡಿದೆ.

ಅಲ್ಲದೆ, ಸಂತ್ರಸ್ತೆಯು ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ರಸೀದಿಯೊಂದಿಗೆ ಪೋಷಕರು ಹಾಗೂ ಮೊದಲನೇ ಆರೋಪಿಯೊಂದಿಗೆ ಬಂದಿದ್ದು, ಮೊದಲ ಆರೋಪಿ ಸಂತ್ರಸ್ತೆಯ ಪತಿ ಎಂಬುದಾಗಿ ವಿವರಿಸಿದ್ದರು. ಆದ ಪರಿಣಾಮ ಅರ್ಜಿದಾರರು ವಯಸ್ಸನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೇ ಕಾರಣದಿಂದ ಅರ್ಜಿದಾರರ ವಿರುದ್ಧ ಅಪರಾಧಿಕ ಹೊಣೆಯನ್ನು ಹೊರಿಸಲಾಗದು ಎಂದು ಪೀಠ ತಿಳಿಸಿದೆ.

ಜೊತೆಗೆ, ತನಿಖಾಧಿಕಾರಿಗಳು ಅರ್ಜಿದಾರರಿಗೆ ಸಂತ್ರಸ್ತೆಯು ಅಪ್ರಾಪ್ತೆ ಎಂಬುದಾಗಿ ತಿಳಿದಿದ್ದರೂ, ಪೊಲೀಸರಿಗೆ ಯಾಕೆ ದೂರು ನೀಡಿಲ್ಲ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಅಲ್ಲದೆ, ಈ ಸಂಬಂಧ ಅನುಮಾನದ ಕತೆಯನ್ನು ಹೇಳಲಾಗಿದೆ. ಇದರ ಆಧಾರದಲ್ಲಿ ಅರ್ಜಿ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ : ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತೆಗೆ ಹೋಟೆಲ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ. ಬಳಿಕ ಫೋನ್ ಮೂಲಕ ಸಂಪರ್ಕಕ್ಕೆ ಬಂದಿದ್ದು, ಇಬ್ಬರ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿ, ವಿವಾಹವಾಗುವುದಾಗಿ ಯುವಕ ಭರವಸೆಯನ್ನೂ ನೀಡಿದ್ದ. ಬಳಿಕ ಸಂತ್ರಸ್ತೆಯನ್ನು ಸಂಬಂಧಿಕರ ಮನೆಗೆ ಕರೆದೊಯ್ದು ಸುಮಾರು 25 ದಿನಗಳ ಕಾಲ ಒಟ್ಟಿಗೆ ಇದ್ದು, ದೈಹಿಕ ಸಂಪರ್ಕ ಬೆಳೆಸಿದ್ದರು.

ನಂತರ ಸಂತ್ರಸ್ತೆಗೆ ಗರ್ಭ ಧರಿಸುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಆಕೆ ತಾಯಿಗೆ ತಿಳಿಸಿದ್ದರು. ಇದಾದ ಬಳಿಕ ಆರೋಪಿ ಗರ್ಭಪಾತ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ನಂತರ ಸಂತ್ರಸ್ತೆಯ ತಾಯಿ, ಆರೋಪಿ ಮತ್ತು ಸಂತ್ರಸ್ತೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ 18 ವರ್ಷ ವಯಸ್ಸು ಎಂದು ತಿಳಿಸಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಬಳಿಕ ಅರ್ಜಿದಾರರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತನಗೆ 18 ವರ್ಷ ವಯಸ್ಸಾಗಿದೆ ಎಂದು ತಿಳಿಸಿ, ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿದ್ದರು.

ಇದಾದ ಕೆಲ ದಿನಗಳ ಬಳಿಕ ಆರೋಪಿಯು ಸಂತ್ರಸ್ತೆಯನ್ನು ಮದುವೆಯಾಗುವುದಿಲ್ಲ. ಬದಲಿಗೆ ಮತ್ತೊಂದು ಹುಡುಗಿಯೊಂದಿಗೆ ವಿವಾಹವಾಗುತ್ತಿರುವುದಾಗಿ ತಿಳಿಸಿದ್ದ. ಇದರಿಂದ ಬೇಸತ್ತಿದ್ದ ಸಂತ್ರಸ್ತೆ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಸಂತ್ರಸ್ತೆಗೆ ಗರ್ಭವತಿ ಮಾಡಿದ್ದ ಪ್ರಿಯಕರ ಹಾಗೂ ಗರ್ಭಪಾತ ಮಾಡಿದ್ದ ವೈದ್ಯರನ್ನು ಕ್ರಮವಾಗಿ ಮೊದಲ ಮತ್ತು ಎರಡನೇ ಆರೋಪಿಯನ್ನಾಗಿ ಮಾಡಿದ್ದರು.

ಅಲ್ಲದೆ, ಪೋಕ್ಸೋ ಕಾಯಿದೆ ಸೆಕ್ಷನ್ 19ರ ಪ್ರಕಾರ, ಅಪ್ರಾಪ್ತರು ಗರ್ಭ ಧರಿಸುವ ಸಂಬಂಧ ಮಾಹಿತಿ ಇದ್ದಲ್ಲಿ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು ಎಂಬ ನಿಯಮವಿದೆ. ಆದರೆ, ಅರ್ಜಿದಾರ ವೈದ್ಯರು ಈ ಕಾರ್ಯ ಮಾಡಿಲ್ಲ ಎಂದು ಆರೋಪಿಸಲಾಗಿತ್ತು. ಜೊತೆಗೆ, ಕಾನೂನುಬಾಹಿರವಾಗಿ ಗರ್ಭಪಾತ ಕಾಯಿದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧ ದೌರ್ಜನ್ಯ ಕಾಯಿದೆಯಡಿ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ನ್ಯಾಯಾಲಯ ಕಾನೂನುಬಾಹಿರವಾಗಿ ಗರ್ಭಪಾತ ಕಾಯಿದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧ ದೌರ್ಜನ್ಯ ಕಾಯಿದೆಯಡಿಯ ಆರೋಪಗಳಿಂದ ಅರ್ಜಿದಾರರನ್ನು ಖುಲಾಸೆಗೊಳಿಸಿತ್ತು. ಆದರೆ, ಪೋಕ್ಸೋ ಕಾಯಿದೆ ಸೆಕ್ಷನ್ 19 ಮತ್ತು 21ರ ಅಡಿಯ ಪ್ರಕರಣದಲ್ಲಿ ವಿಚಾರಣೆಗೆ ಪರಿಗಣಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಂತ್ರಸ್ತೆ ಆಕೆಯ ತಾಯಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಕಾರವಾರದ ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ್ದ ಹೊರರೋಗಿಗಳ ರಸೀದಿ ತಂದಿದ್ದು, ಅದರಲ್ಲಿ ಆಕೆಯ ವಯಸ್ಸು 18 ಎಂಬುದಾಗಿ ಇತ್ತು. ಆದ್ದರಿಂದ ಗರ್ಭಪಾತ ಮಾಡಿದ್ದು, ದೂರು ನೀಡಿರುವ ಪ್ರಮೇಯ ಉಂಟಾಗಿಲ್ಲ. ಆದ್ದರಿಂದ ಪ್ರಕರಣದಿಂದ ಅರ್ಜಿದಾರರನ್ನು ಮುಕ್ತಗೊಳಿಸಬೇಕು ಎಂದು ಕೋರಿದ್ದರು.