ಮನೆ ರಾಜ್ಯ ತಿರುಚಿದ ವಿಡಿಯೋ ಶೇರ್​​​: ಖರ್ಗೆ, ಜೈರಾಮ್​ ರಮೇಶ್​ ಗೆ​ ಲೀಗಲ್ ನೋಟಿಸ್​ ನೀಡಿದ ನಿತಿನ್​ ಗಡ್ಕರಿ

ತಿರುಚಿದ ವಿಡಿಯೋ ಶೇರ್​​​: ಖರ್ಗೆ, ಜೈರಾಮ್​ ರಮೇಶ್​ ಗೆ​ ಲೀಗಲ್ ನೋಟಿಸ್​ ನೀಡಿದ ನಿತಿನ್​ ಗಡ್ಕರಿ

0

ನಾಗ್ಪುರ (ಮಹಾರಾಷ್ಟ್ರ): ತಮ್ಮ ವಿರುದ್ಧ ಸುಳ್ಳು ಮಾಹಿತಿ ಮತ್ತು ಅವಹೇಳನಕಾರಿ ವಿಡಿಯೋವನ್ನು ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಅವರಿಗೆ ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರು ಲೀಗಲ್​ ನೋಟಿಸ್​ ಜಾರಿ ಮಾಡಿದ್ದಾರೆ.

ಕಾಂಗ್ರೆಸ್ ​ನ ಹಿರಿಯ ನಾಯಕರು ಪಕ್ಷ ಸೇರಿದಂತೆ ಅವರ ವೈಯಕ್ತಿಕ ಎಕ್ಸ್​ ಖಾತೆಯಲ್ಲಿ ತಮ್ಮ ವಿರುದ್ಧದ ಸುಳ್ಳು ಮಾಹಿತಿಯುಳ್ಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಿಂದ ತಮಗೆ ಅಪಖ್ಯಾತಿ ತಂದಿದ್ದಾರೆ ಎಂದು ಕೇಂದ್ರ ಸಚಿವರು ಅದರಲ್ಲಿ ದೂರಿದ್ದಾರೆ.

ವೆಬ್​ ಪೋರ್ಟಲ್ ​ವೊಂದಕ್ಕೆ ತಾವು ನೀಡಿರುವ ಸಂದರ್ಶನದ 19 ಸೆಕೆಂಡ್ ​ಗಳ ವಿಡಿಯೋವನ್ನು ಕಾಂಗ್ರೆಸ್​ ತಿರುಚಿದೆ. ಸಂದರ್ಭೋಚಿತ ವಾಕ್ಯ, ಪದಗಳನ್ನು ಕತ್ತರಿಸಿ ತಪ್ಪಾಗಿ ಅರ್ಥೈಸುವಂತೆ ಮಾಡಲಾಗಿದೆ. ಕಾಂಗ್ರೆಸ್​ ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಈ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಇದನ್ನು ಕೇಳುವ ಮತ್ತು ನೋಡುವ ಜನರಿಗೆ ಸುಳ್ಳು ಮಾಹಿತಿ ರವಾನೆಯಾಗುತ್ತದೆ ಎಂದು ಗಡ್ಕರಿ ಅವರು ನೋಟಿಸ್​ ನಲ್ಲಿ ಉಲ್ಲೇಖಿಸಿದ್ದಾರೆ.

ವಿಡಿಯೋ ತುಣುಕಿನಲ್ಲಿ ಪದಗಳ ಸಂದರ್ಭೋಚಿತ ಉದ್ದೇಶ ಮತ್ತು ಅರ್ಥವನ್ನು ಮರೆಮಾಚಲಾಗಿದೆ. ಸಾರ್ವಜನಿಕರ ದೃಷ್ಟಿಯಲ್ಲಿ ಗಡ್ಕರಿ ಅವರ ಬಗ್ಗೆ ಗೊಂದಲ, ಅಪಖ್ಯಾತಿ ಸೃಷ್ಟಿಸುವ ದುರುದ್ದೇಶ ಇದರ ಹಿಂದಿದೆ. ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ನಡುವೆ ಬಿರುಕು ಮೂಡಿಸಲು ಪ್ರಯತ್ನ ನಡೆಸಲಾಗಿದೆ ಎಂದು ನೋಟಿಸ್‌ ನಲ್ಲಿ ತಿಳಿಸಲಾಗಿದೆ.

ಮೈಕ್ರೋಬ್ಲಾಗಿಂಗ್​ ಖಾತೆಯಲ್ಲಿ ತಿರುಚಿದ ವಿಡಿಯೋವನ್ನು ಹಂಚಿಕೊಂಡು, ಹಕ್ಕುಚ್ಯುತಿ ತಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಮತ್ತು ಜೈರಾಂ ರಮೇಶ್​ ಅವರು ನೋಟಿಸ್​ ಜಾರಿಯಾದ 24 ಗಂಟೆಯೊಳಗೆ ಸಾಮಾಜಿಕ ಜಾಲತಾಣಗಳಿಂದ ವಿಡಿಯೋವನ್ನು ಅಳಿಸಿ ಹಾಕಬೇಕು. ಮೂರು ದಿನಗಳಲ್ಲಿ ಲಿಖಿತವಾಗಿ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಸಿವಿಲ್​ ಅಥವಾ ಕ್ರಿಮಿನಲ್​ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ನಿತಿನ್​ ಗಡ್ಕರಿ ಅವರು ಹಿಂದಿಯಲ್ಲಿ ಮಾತನಾಡುತ್ತಿರುವ ವಿಡಿಯೋದಲ್ಲಿ, ‘ಇಂದು ಹಳ್ಳಿಗಳಲ್ಲಿ ಸಾಮಾನ್ಯರು ಮತ್ತು ರೈತರು ಸಂಕಷ್ಟದಲ್ಲಿದ್ದಾರೆ. ಗ್ರಾಮಗಳಿಗೆ ಉತ್ತಮ ರೀತಿಯ ರಸ್ತೆಗಳಿಲ್ಲ, ಕುಡಿಯುವ ನೀರಿನ ಸೌಲಭ್ಯವಿಲ್ಲ. ಗುಣಮಟ್ಟದ ಆಸ್ಪತ್ರೆಗಳು, ಸರ್ಕಾರಿ ಶಾಲೆಗಳು ಇಲ್ಲವಾಗಿವೆ’ ಎಂದು ಹೇಳುತ್ತಿರುವುದು ಕಾಣಬಹುದು.

ಸಂದರ್ಶನದಲ್ಲಿ ಅವರು ಹೇಳಿದ್ದನ್ನು ಪೂರ್ಣವಾಗಿ ತಿರುಚಲಾಗಿದೆ ಎಂದು ಹೇಳಲಾಗಿದೆ.