ಮನೆ ರಾಜ್ಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಶಂಕಿತನ ಪತ್ತೆಗೆ ಎಂಟು ವಿಶೇಷ ತಂಡ ರಚನೆ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಶಂಕಿತನ ಪತ್ತೆಗೆ ಎಂಟು ವಿಶೇಷ ತಂಡ ರಚನೆ

0

ಬೆಂಗಳೂರು: ಬ್ರೂಕ್‌ ಫೀಲ್ಡ್‌ ನಲ್ಲಿರುವ ದಿ ರಾಮೇಶ್ವರಂ ಕೆಫೆ ಹೋಟೆಲ್‌ ನಲ್ಲಿ ಬಾಂಬ್ ಇರಿಸಿ ಪರಾರಿಯಾಗಿರುವ ಶಂಕಿತನ ಪತ್ತೆಗಾಗಿ ಪೊಲೀಸರ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ನಗರ ಹಾಗೂ ಹೊರ ರಾಜ್ಯಗಳಲ್ಲಿ ಹುಡುಕಾಟ ಆರಂಭವಾಗಿದೆ.

ಕೆಫೆಗೆ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದಿದ್ದರು. ಸಿಬ್ಬಂದಿ, ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಗ್ರಾಹಕರ ತಟ್ಟೆಗಳನ್ನು ತೊಳೆಯಲು ಮೀಸಲಿಟ್ಟ ಜಾಗದ ಪಕ್ಕದಲ್ಲಿದ್ದ ಕಟ್ಟೆ ಮೇಲೆ ಬಾಂಬ್ ಸ್ಫೋಟಗೊಂಡಿತ್ತು. ಎಲ್ಲರೂ ದಿಕ್ಕಾಪಾಲಾಗಿ ಹೋಟೆಲ್‌ ನಿಂದ ಹೊರಗೆ ಓಡಿ ಬಂದರು. ಘಟನಾ ಸ್ಥಳದಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದರು.

ತೀವ್ರ ಗಾಯಗೊಂಡಿದ್ದ ಮಹಿಳೆಯ ಮುಖ, ಕಾಲು, ಕೈ ಹಾಗೂ ಇತರೆ ಭಾಗಕ್ಕೆ ಗಾಯವಾಗಿತ್ತು. ಉಳಿದವರ ಬಟ್ಟೆಗಳು ಹರಿದಿದ್ದವು. ಮೈಗೂ ಗಾಯವಾಗಿತ್ತು. ಎಲ್ಲರನ್ನೂ ಆಟೊದಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು  ಎಂದರು.

ಹೋಟೆಲ್‌ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಶಂಕಿತನ ಹಾವ–ಭಾವ ಸೆರೆಯಾಗಿದೆ. ಹೋಟೆಲ್ ಅಕ್ಕ–ಪಕ್ಕದಲ್ಲಿರುವ ಕ್ಯಾಮೆರಾದಲ್ಲಿ ಮುಖ ಚಹರೆಯ ಸುಳಿವು ಲಭ್ಯವಾಗಿದೆ. ವಿಡಿಯೊ ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು  ತಿಳಿಸಿದರು.