ಮನೆ ಕಾನೂನು ಪತ್ನಿ ದುಡಿಯಲು ಸಮರ್ಥಳಿದ್ದರೂ ಜೀವನಾಂಶ ನೀಡಲೇಬೇಕು: ಹೈಕೋರ್ಟ್

ಪತ್ನಿ ದುಡಿಯಲು ಸಮರ್ಥಳಿದ್ದರೂ ಜೀವನಾಂಶ ನೀಡಲೇಬೇಕು: ಹೈಕೋರ್ಟ್

0

ಬೆಂಗಳೂರು: ಮಕ್ಕಳನ್ನು ನೋಡಿಕೊಳ್ಳುವುದು ಸ್ವಲ್ಪ ಹೊತ್ತಿನ ಕೆಲಸವಷ್ಟೇ. ನಂತರ ಉದ್ಯೋಗ ಮಾಡಲು ಸಮರ್ಥರಿದ್ದರೂ ಪತ್ನಿ ಮಾಡುತ್ತಿಲ್ಲ. ಹಾಗಾಗಿ ಆಕೆಗೆ ಜೀವನಾಂಶ ನೀಡಲಾಗದು ಎಂಬ ಪತಿಯ ವಾದವನ್ನು ತಳ್ಳಿಹಾಕಿರುವ ಕರ್ನಾಟಕ ಹೈಕೋರ್ಟ್‌, ಆಕೆಗೆ ಜೀವನಾಂಶ ನೀಡಲೇಬೇಕು ಎಂದು ಆದೇಶ ನೀಡಿದೆ.

ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ 18 ಸಾವಿರ ರೂ ಜೀವನಾಂಶವನ್ನು 36 ಸಾವಿರಕ್ಕೆ ಹೆಚ್ಚಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ,” ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣವಧಿ ಕೆಲಸ,” ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ”ಪತಿ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿರುವ ಹಿನ್ನೆಲೆಯಲ್ಲಿ ಪತ್ನಿಗೆ ಮಾಸಿಕ 36 ಸಾವಿರ ರೂ. ಜೀವನಾಂಶ ಪಾವತಿಸಲೇಬೇಕು,” ಎಂದು ಹೇಳಿದೆ. ”ಪತಿ ಕೆನರಾ ಬ್ಯಾಂಕ್‌ ಮ್ಯಾನೇಜರ್‌. ಆದು ಯಾವಾಗ ಬೇಕಾದರೂ ತೆಗೆದುಹಾಕುವಂತಹ ಉದ್ಯೋಗವಲ್ಲ. ನಿಗದಿತ ವಯಸ್ಸಿನವರೆಗೆ ಭದ್ರತೆ ಇರುವ ಉದ್ಯೋಗ. ಸದ್ಯ ಅವರು ಸುಮಾರು 90 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ಹಾಗಾಗಿ, ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಗೆ 36 ಸಾವಿರ ರೂ. ಜೀವನಾಂಶ ನೀಡಲೇಬೇಕು,” ಎಂದು ಆದೇಶಿಸಿದೆ.

ಪ್ರತಿವಾದಿ ಪತಿಯು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಯೂ ದುಡಿಯಬಹುದು. ಆದರೆ ಸುಮ್ಮನೆ ಸೋಮಾರಿಯಂತೆ ಓಡಾಡಿಕೊಂಡಿದ್ದಾರೆ ಎಂದು ಹೇಳುವುದನ್ನು ಒಪ್ಪಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಜೀವನಾಂಶ ನೀಡಲೇಬೇಕು. ಅದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು,” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ

ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಆಗಿರುವ ಪತಿ ಮತ್ತು ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ 11 ವರ್ಷ ಹಾಗೂ 6 ವರ್ಷದ ಮಕ್ಕಳಿದ್ದಾರೆ. ಆದರೆ ಮೊದಲ ಮಗುವಾದ ನಂತರ ಪತ್ನಿ ಉದ್ಯೋಗ ತ್ಯಜಿಸಿದ್ದರು. ಆನಂತರ ಮತ್ತೊಂದು ಮಗುವಾಯಿತು. ಹಾಗಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈ ನಡುವೆ ಇಬ್ಬರಲ್ಲಿ ಮನಸ್ತಾಪ ಜಾಸ್ತಿಯಾಗಿ ಪರಸ್ಪರ ವಿಚ್ಛೇದನ ಕೋರಿದ್ದರು. ಆ ಅರ್ಜಿ ಬಾಕಿ ಇರುವಾಗಲೇ ಪತ್ನಿ ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 24ರಡಿ ಪ್ರತಿ ತಿಂಗಳು 36 ಸಾವಿರ ರೂ ಮಧ್ಯಂತರ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ 18 ಸಾವಿರ ರೂ. ಜೀವನಾಂಶ ನಿಗದಿಪಡಿಸಿ ಆ ಮೊತ್ತವನ್ನು ಪಾವತಿಸುವಂತೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ ಮೊರೆ ಹೋಗಿದ್ದರು.