ಮನೆ ರಾಜ್ಯ ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಎನ್‌ ಐಎ ದಾಳಿ

ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಎನ್‌ ಐಎ ದಾಳಿ

0

ಬೆಂಗಳೂರು: ಲಷ್ಕರ್-ಎ-ತೊಯ್ಬಾ (ಎಲ್‌ ಇಟಿ) ಭಯೋತ್ಪಾದಕ ಕೈದಿಗಳನ್ನು ಆಮೂಲಾಗ್ರೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ ಐಎ) ಮಂಗಳವಾರ ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ದಾಳಿ ನಡೆಸಿತು.

ಕಳೆದ ಅಕ್ಟೋಬರ್ ನಲ್ಲಿ ಬೆಂಗಳೂರಿನಲ್ಲಿ ನಗರ ಪೊಲೀಸರು ಏಳು ಪಿಸ್ತೂಲ್‌ ಗಳು, ನಾಲ್ಕು ಹ್ಯಾಂಡ್ ಗ್ರೆನೇಡ್‌ ಗಳು, ಒಂದು ಮ್ಯಾಗಜೀನ್, 45 ಜೀವಂತ ಗುಂಡುಗಳು ಮತ್ತು ನಾಲ್ಕು ವಾಕಿ-ಟಾಕಿಗಳನ್ನು ವಶಪಡಿಸಿಕೊಳ್ಳುವುದರ ಮೂಲಕ ಮೂಲ ಪ್ರಕರಣವು ದಾಖಲಾಗಿತ್ತು.

ಈ ಹಿಂದೆ ಮೊಹಮ್ಮದ್ ಉಮರ್, ಮೊಹಮ್ಮದ್ ಫೈಸಲ್ ರಬ್ಬಾನಿ, ತನ್ವೀರ್ ಅಹಮದ್ ಮತ್ತು ಮೊಹಮ್ಮದ್ ಫಾರೂಕ್ ಹಾಗೂ ಪರಾರಿಯಾಗಿದ್ದ ಜುನೈದ್ ಆವರಣದಲ್ಲಿ ನಡೆಸಿದ ದಾಳಿಯಲ್ಲಿ ಎನ್‌ ಐಎ ತಂಡಗಳು ಸಾಕಷ್ಟು ಡಿಜಿಟಲ್ ಸಾಧನಗಳು, ದೋಷಾರೋಪಣೆಯ ದಾಖಲೆಗಳು ಮತ್ತು 7.3 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಪರಾರಿಯಾಗಿದ್ದು, ಇಂಡಿಯನ್ ಪೀನಲ್ ಕೋಡ್, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯಡಿ ಕೇಸ್ ದಾಖಲಿಸಲಾಗಿದೆ.

ಆರಂಭದಲ್ಲಿ ಐವರನ್ನು ಬಂಧಿಸಲಾಗಿತ್ತು ಮತ್ತು ಅವರ ವಿಚಾರಣೆಯ ಬಳಿಕ ಮತ್ತೊಬ್ಬನನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಇದುವರೆಗೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಅಕ್ಟೋಬರ್ 25 ರಂದು ಪ್ರಕರಣವನ್ನು ಕೈಗೆತ್ತಿಕೊಂಡಾಗ ಎನ್‌ಐಎ ಎಲ್ಲಾ ಆರು ಮಂದಿಯ ಕಸ್ಟಡಿಯನ್ನು ಪಡೆದಿತ್ತು.

ಉಮರ್, ರಬ್ಬಾನಿ, ಅಹ್ಮದ್, ಫಾರೂಕ್ ಮತ್ತು ಜುನೈದ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರುವಾಗ ಎಲ್ ಇಟಿ ಸದಸ್ಯ ಮತ್ತು ಜೀವಾವಧಿ ಶಿಕ್ಷೆ ಹೊಂದಿರುವ ಅಪರಾಧಿ ಟಿ ನಾಸೀರ್ ನೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಎಂದು ಎನ್ಐಎ ವಕ್ತಾರರು ಈ ಹಿಂದೆ ಬಹಿರಂಗಪಡಿಸಿದ್ದರು.