ಬೆಂಗಳೂರು (Bengaluru)- ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆ’ಯನ್ನು ಸುಗ್ರೀವಾಜ್ಞೆ ಮೂಲಕ ಕಾಯ್ದೆಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ʻಸುಗ್ರೀವಾಜ್ಞೆ ಹೊರಡಿಸಲು ಯಾವುದೇ ಕಾನೂನು ತೊಡಕು ಇಲ್ಲ’ ಎಂದು ಕಾನೂನು ಮತ್ತು ಸಂಸದೀಯ ಇಲಾಖೆ ಅಭಿಪ್ರಾಯ ನೀಡಿದೆ. ಹೀಗಾಗಿ, ಗುರುವಾರ (ಮೇ 12) ನಡೆಯಲಿರುವ ಸಚಿವ ಸಂಪುಟ ಸಭೆಗೆ ಪ್ರಸ್ತಾವ ಮಂಡಿಸಲು ಗೃಹ ಇಲಾಖೆ ಟಿಪ್ಪಣಿ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಕಾಯ್ದೆ ಜಾರಿ ವಿಳಂಬವಾಗಬಾರದು ಎನ್ನುವ ಕಾರಣಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡು ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗುವುದು.
ಬೆಳಗಾವಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ (2021ರ ಡಿಸೆಂಬರ್ 23) ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಿ ಸರ್ಕಾರ ಅಂಗೀಕಾರ ಪಡೆದಿತ್ತು. ಆದರೆ, ಕಾಂಗ್ರೆಸ್, ಜೆಡಿಎಸ್ ಸದಸ್ಯರ ತೀವ್ರ ವಿರೋಧ ಮತ್ತು ಅಗತ್ಯ ಬಲ ಇಲ್ಲದೇ ಇದ್ದ ಕಾರಣ ವಿಧಾನ ಪರಿಷತ್‌ನಲ್ಲಿ ಮಸೂದೆ ಮಂಡಿಸಿರಲಿಲ್ಲ. ಇದೀಗ, ವಿಧಾನಸಭೆಯಲ್ಲಿ ಮಂಡಿಸಿದ್ದ ಮಸೂದೆಯನ್ನೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಪ್ರಸ್ತಾವಿತ ಕಾಯ್ದೆಯ ಪ್ರಮುಖ ಅಂಶ
ಆಮಿಷ, ಪ್ರಲೋಭನೆ, ಉದ್ಯೋಗ, ಉಚಿತ ಶಿಕ್ಷಣ, ನಗದು, ಮದುವೆ ಆಗುವುದಾಗಿ ವಾಗ್ದಾನ, ಉತ್ತಮ ಜೀವನ ಶೈಲಿಯ ಭರವಸೆ, ದೈವಿಕ ಸಂತೋಷ, ಒತ್ತಾಯ, ವಂಚನೆ ಮೂಲಕ ಮತಾಂತರ ಮಾಡುವುದನ್ನು ನಿಷೇಧಿಸುವ ಅಂಶ ಈ ಕಾಯ್ದೆಯಲ್ಲಿದೆ. ಯಾವುದೇ ಒಂದು ಧರ್ಮದ ಆಚರಣೆಗಳನ್ನು ಅವಹೇಳನ ಮಾಡುವುದನ್ನೂ ಆಮಿಷ ಎಂದೇ ಪರಿಗಣಿಸಲಾಗಿದೆ. ವ್ಯಕ್ತಿಯೊಬ್ಬ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರವಾದಾಗ ಮಾತ್ರ ಕಾಯ್ದೆ ಅನ್ವಯವಾಗಲಿದೆ. ಆದರೆ, ಯಾವುದೋ ಕಾರಣಕ್ಕೆ ಮತಾಂತರಗೊಂಡು, ಮರಳಿ ಮಾತೃಧರ್ಮಕ್ಕೆ ಬರುವುದಾದರೆ ಈ ಕಾಯ್ದೆ ಅನ್ವಯವಾಗುವುದಿಲ್ಲ. ಮತಾಂತರ ಮಾಡಿದರೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ.