ಮನೆ ಅಪರಾಧ ವನ್ಯಜೀವಿ ಮಾಂಸ ಮಾರಾಟ ಮಾಡುತ್ತಿದ್ದ ಹೋಟೆಲ್​ ಮೇಲೆ ದಾಳಿ: ಪ್ರಾಣಿಗಳ ರಕ್ಷಣೆ

ವನ್ಯಜೀವಿ ಮಾಂಸ ಮಾರಾಟ ಮಾಡುತ್ತಿದ್ದ ಹೋಟೆಲ್​ ಮೇಲೆ ದಾಳಿ: ಪ್ರಾಣಿಗಳ ರಕ್ಷಣೆ

0

ಚಿಕ್ಕಬಳ್ಳಾಪುರ(Chikkaballapura): ವನ್ಯ ಜೀವಿಗಳನ್ನು ಬಂಧಿಸಿಟ್ಟು ಸಾಕುವುದಲ್ಲದೆ ಮಾಂಸ ಮಾರಾಟ ಮಾಡುತ್ತಿದ್ದ ಹೋಟೆಲ್ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರಿನಲ್ಲಿ ನಡೆದಿದೆ.

ಬಂಧಿತರಿಂದ ಜೀವಂತ ಉಡಗಳು ಸೇರಿ ಇತರ ಪ್ರಾಣಿಗಳನ್ನು ರಕ್ಷಿಸಲಾಗಿದೆ. ಚೇಳೂರಿನ ಸರ್ಕಾರಿ ಕಾಲೇಜು ರಸ್ತೆಯ ಬದಿಯಲ್ಲಿ ಹೋಟೆಲ್​ ಇಟ್ಟುಕೊಂಡಿದ್ದ ಇಸ್ಮಾಯಿಲ್ ಬಂಧಿತ ಪ್ರಮುಖ ಆರೋಪಿ. ಈತನ ಹೋಟೆಲ್‍ನಲ್ಲಿ ಎಲ್ಲಿಯೂ ಸಿಗದ ಮಾಂಸದೂಟ ಸಿಗುತ್ತಿತ್ತು. ಅಲ್ಲದೆ, ಈತ ಕಾಡುಪ್ರಾಣಿ, ಪಕ್ಷಿಗಳನ್ನು ಜೀವಂತವಾಗಿ ಕಾಡಿನಿಂದ ತರಿಸಿ ಸಾಕಾಣಿಕೆ ಮಾಡುತ್ತಿದ್ದ. ಬಳಿಕ ಭಾರಿ ಬೆಲೆಗೆ ಪ್ರಾಣಿಗಳು ಮತ್ತು ಮಾಂಸವನ್ನು ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಈ ಬಗ್ಗೆ ರಾಜ್ಯ ಅರಣ್ಯ ಸಂಚಾರಿ ದಳದ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಹೋಟೆಲ್ ಮುಂದೆ ಅಧಿಕಾರಿಗಳು ಹೊಂಚು ಹಾಕಿ ಕುಳಿತಿದ್ದರು. ಇದೇ ಸಮಯಕ್ಕೆ ಹಕ್ಕಿ-ಪಿಕ್ಕಿ ಜನಾಂಗದ ವ್ಯಕ್ತಿಯೋರ್ವ ವನ್ಯ ಪ್ರಾಣಿಗಳನ್ನು ಎತ್ತಿಕೊಂಡು ಬಂದು ಮಾಲೀಕನಿಗೆ ಕೊಡುತ್ತಿದ್ದಂತೆ, ಬೆಂಗಳೂರು ಜಾಲಹಳ್ಳಿ ಸಂಚಾರಿ ದಳದ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ.

ಮಾಲೀಕ ಇಸ್ಮಾಯಿಲ್, ಹಕ್ಕಿ-ಪಿಕ್ಕಿ ವ್ಯಕ್ತಿ, ಹೋಟೆಲ್​ ಕೆಲಸಗಾರ ಬಾಬಾಜಾನ್ ಸೇರಿ ಇತರರನ್ನು ಬಂಧಿಸಲಾಗಿದೆ. ಹೋಟೆಲ್‍ ಪರೀಶೀಲಿಸಿ ಉಡಗಳು, ಇತರೆ ವನ್ಯ ಜೀವಿಗಳನ್ನು ರಕ್ಷಿಸಲಾಗಿದೆ. ವನ್ಯ ಜೀವಿಗಳ ಮಾರಾಟ ಮತ್ತು ಪ್ರಾಣಿ ವಧೆ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.