ಮನೆ ರಾಜಕೀಯ ಚುನಾವಣೆಗೆ ಮುನ್ನವೇ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶಸ್ತ್ರ ತ್ಯಾಗ ಮಾಡಿತೇ ಕಾಂಗ್ರೆಸ್ ಹೈಕಮಾಂಡ್? ಇದು ಕೊಡಗಿನ...

ಚುನಾವಣೆಗೆ ಮುನ್ನವೇ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶಸ್ತ್ರ ತ್ಯಾಗ ಮಾಡಿತೇ ಕಾಂಗ್ರೆಸ್ ಹೈಕಮಾಂಡ್? ಇದು ಕೊಡಗಿನ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ವಿಶ್ಲೇಷಣೆ

0

ಎಲ್ಲೆಡೆ ಯಾವ ಲೋಕಸಭಾ ಕ್ಷೇತ್ರಕ್ಕೆ ಯಾರು ಸೂಕ್ತ ಅಭ್ಯರ್ಥಿ ಎಂದು ರಾಜಕೀಯ ಪಕ್ಷಗಳು ದುರ್ಬಿನಿನಲ್ಲಿ ಸಂಭವನೀಯ ಅಭ್ಯರ್ಥಿಗಳ ಅರ್ಹತೆ, ತಾಕತ್ತು ಮತ್ತು ಬಲಹೀನತೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ಬಹಳಷ್ಟು ಕಡೆ ಮತದಾರರು ಹಾಲಿ ಮುಖಗಳಿಗೆ ಕರಿಮಣಿ ಮಾಲೀಕ ನೀನಲ್ಲ ನೀನಲ್ಲ ಎಂದು ಬದಲಾವಣೆ ಬಯಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಲಿ ಜನಪ್ರತಿನಿಧಿಗಳ ವಿರುದ್ಧ ಕೇಂದ್ರಕ್ಕೆ ಪೋಸ್ಟ್ ಕಾರ್ಡ್ ಕಾರ್ಡ್ ಚಳುವಳಿವರೆಗೆ ಈ ಚುನಾವಣಾ ಕಾವನ್ನು ತಲುಪಿಸಿದ್ದಾರೆ. 


ಕೊಡಗು ಮೈಸೂರು ಕ್ಷೇತ್ರದಿಂದ ಬಿಜೆಪಿಯಿಂದ ಮತ್ತೆ ಪ್ರತಾಪ ಸಿಂಹ ಎಂಬ ಒಂದು ವಾದವಿದ್ದರೆ ಇಲ್ಲ ಮೋದಿಜಿಯವರ ತಂತ್ರಗಾರಿಕೆ ಬೇರೆ ಇದೆ ಅಚ್ಚರಿಯ ಅಭ್ಯರ್ಥಿಗೆ ಕಾದು ನೋಡಿ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ.

ಕಾಂಗ್ರೆಸ್’ನಿಂದ ಡಾಕ್ಟರ್ ಸುಶ್ರುತ್ ಗೌಡ, ಹಳ್ಳಿ ಹಕ್ಕಿ ವಿಶ್ವನಾಥ್ ಇವರ ಹೆಸರು ಮುನ್ನಡೆಯಲ್ಲಿತ್ತು. ಕಳೆದ ಐದು ವರ್ಷಗಳಿಂದ ನಾಪತ್ತೆಯಾಗಿ ಈಗ ದಿಢೀರ್ ಪ್ರತ್ಯಕ್ಷವಾಗಿ ಕೊಡಗಿನ ರೆಸಾರ್ಟುಗಳಲ್ಲಿ ಒಂದಿಷ್ಟು ತಮ್ಮ ಬೆಂಬಲಿಗರಿಗೆ ಊಟೋಪಚಾರ ಕೊಟ್ಟು ತಮ್ಮ ಪರವಾಗಿ ಅಲೆ ಎಬ್ಬಿಸಲು ಪ್ರಯತ್ನಿಸಿದ ಹಳ್ಳಿ ಹಕ್ಕಿಯ ಪ್ರಯತ್ನ ಯಾಕೋ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ವಿಫಲವಾಗಿ ಹಳ್ಳಿ ಹಕ್ಕಿ ಪುರ್ರನೆ ಮರಳಿ ತನ್ನ ಗೂಡಿಗೆ ಹಾರಿ ಹೋಗಿ ಆಯ್ತು.

ಕೊಡಗಿನ ಕಾಂಗ್ರೆಸ್ ಕಾರ್ಯಕರ್ತರು ಈ ಬಾರಿ ನಮ್ಮದೇ ಎರಡು ಶಾಸಕರಿರುವುದು ಸರ್ಕಾರ ಕೂಡ ನಮ್ಮದೇ ನಮಗೆ ಸೂಕ್ತ ಅಭ್ಯರ್ಥಿ ಡಾಕ್ಟರ್ ಸುಶ್ರುತ್ ಗೌಡ ಮತ್ತು ಅವರಿಗೆ ಟಿಕೆಟ್ ಸಿಗೋದು ಖಚಿತ ಎಂಬ ನಂಬಿಕೆಯಲ್ಲಿದ್ದರು. ಡಾ. ಸುಶ್ರುತ್ ಗೌಡ ವಿದೇಶದಲ್ಲಿ ಕಲಿತು ಬಂದವರು, ಕೇಂದ್ರದ ಕಾಂಗ್ರೆಸ್ ಮುಖಂಡರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವವರು. ಮೈಸೂರು ಕೊಡಗಿನ ವಿವಿಧ ರೋಗಿಗಳಿಗೆ ತಮ್ಮದೇ ಗೋಪಾಲ್ ಗೌಡ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಾ ನಿರಂತರವಾಗಿ ಬಡವ ಬಲ್ಲಿದರನ್ನದೆ ಜನರ ಸಂಪರ್ಕದಲ್ಲಿ ಇರುವವರು. ಯಾವುದೇ ಜನಪ್ರತಿನಿಧಿಗಳಿಗೆ ಕಡಿಮೆ ಇಲ್ಲದಂತೆ ಸದಾ ಮನೆಯ ಸುತ್ತ ನೂರಾರು ಜನ ನೆರೆದಿರುವಂತಹ ವರ್ಚಸ್ಸಿನ ವ್ಯಕ್ತಿತ್ವದವರು. ಪಾಪ ಅವರು ಕೂಡ ಟಿಕೆಟ್ ಸಿಗುತ್ತದೆ ಎನ್ನುವ ಆಸೆಯಿಂದ ಕಳೆದ ನಾಲ್ಕು ವರ್ಷಗಳಿಂದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಿರಂತರ ಪ್ರವಾಸ ಮಾಡುತ್ತ, ವಿಶೇಷ ಭೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಕೊಡಗನ್ನು ಅರಿಯುವ ಪ್ರಯತ್ನದಲ್ಲಿ ಬಹುತೇಕ ಯಶಸ್ವಿಯಾದವರು.

ಕೊಡಗಿನ ವಿವಿಧ ಸಮಸ್ಯೆಗಳಿಗೆ ತಮ್ಮದೇ ಆದ ಪರಿಹಾರ ರೂಪಿಸುವ ಯತ್ನದಲ್ಲಿ ಇರುವಾಗಲೇ ಈ ಬಾರಿ ಅವರಿಗೆ ಟಿಕೆಟ್ ಇಲ್ಲ ಅದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್’ಗೇ ಪಕ್ಕ ಎನ್ನುವ ಸಂದೇಶ ಬರುತ್ತಿದ್ದಂತೆ ಅವರ ಅಷ್ಟೂ ಬೆಂಬಲಿಗರಿಗೆ ತೀವ್ರ ನಿರಾಸೆ ಉಂಟು ಮಾಡಿದೆ. ಇನ್ನು ಈ ಲಕ್ಷ್ಮಣ್ ಯಾರು ಎಂದು ನೋಡಲು ಹೊರಟರೆ ಜನರಿಗೆ ಅವರು ಯಾರು, ಅವರ ಹಿನ್ನೆಲೆ ಮತ್ತು ಸಾಧನೆ ಏನು ಎಂದು ಕೇಳಿದರೆ ಹಾಲಿ ಸಂಸದ ಪ್ರತಾಪ ಸಿಂಹ ಅವರಿಂದ ನ್ಯಾಯಾಲಯದಲ್ಲಿ ತಡೆಯಾಜ್ಞೆ ಹಾಕಿಸಿಕೊಂಡವರು ಎಂದು ಅಷ್ಟೇ ಗೊತ್ತಿರೋದು. ನಿರಂತರ ಪತ್ರಿಕಾಗೋಷ್ಠಿ ನಡೆಸುತ್ತಾ ಪ್ರತಾಪ್ ಸಿಂಹ ಅವರನ್ನು ತೆಗಳಿಕೊಂಡು ಬಂದಿರುವುದೇ ಇವರ ಏಕೈಕ ಸಾಧನೆ. ಕೊಡಗಿನ ಯಾವುದೇ ಗ್ರಾಮದ ಯಾವುದೇ ಕಾರ್ಯಕರ್ತನ ವೈಯಕ್ತಿಕ ಪರಿಚಯವಿಲ್ಲ, ಕೊಡಗಿನ ಮತದಾರರಿಗೆ ಪರಿಚಯವೇ ಇಲ್ಲದ ಇವರಿಗೆ ಕೊಡಗಿನ ಸಮಸ್ಯೆಗಳ ಬಗ್ಗೆ ಏನೂ ಮಾಹಿತಿ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಪರಮ ಸತ್ಯ.

ಕೊಡಗಿನ ಎರಡೂ ಶಾಸಕರು ಏನೇ ಹರಸಾಹಸ ಪಟ್ಟರೂ ಇವರು ಲೋಕಸಭೆಗೆ ಅಭ್ಯರ್ಥಿಯಾದರೆ ಎರಡೂ ಶಾಸಕರು ತಮ್ಮ ಚುನಾವಣೆಯಲ್ಲಿ ಪಡೆದ ಅರ್ಧದಷ್ಟು ಮತ ಕೂಡ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೀಳುವುದಿಲ್ಲ ಮತ್ತು ರಾಜ್ಯ ನಾಯಕರ ಮುಂದೆ ಕೊಡಗಿನ ಶಾಸಕರಿಗೆ ಅವಮಾನ ಖಚಿತ. ಇಂಟಲಿಜೆನ್ಸ್ ವಿಭಾಗವನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಇಂತಹ ಐತಿಹಾಸಿಕ ತಪ್ಪು ನಿರ್ಣಯ ಯಾಕೆ ಮಾಡುತ್ತಿದೆ.

ಲಕ್ಷ್ಮಣ್ ಅಭ್ಯರ್ಥಿ ಎಂಬ ಒಳ ಮಾಹಿತಿ ಸಿಗುತ್ತಿದ್ದಂತೆ ಸಂಭಾವ್ಯ ಬಿಜೆಪಿ ಅಭ್ಯರ್ಥಿಯಾದ ಪ್ರತಾಪ್ ಸಿಂಹ ಮೀಸೆ ಇಲ್ಲದ ತಮ್ಮ ಮೇಲು ತುಟಿಯ ಅಂಚಿನಲ್ಲೇ ಗೆಲುವಿನ ಕಿರುನಗೆ ಬೀರುತ್ತಿದ್ದಾರೆ ಎನ್ನಲಾಗುತ್ತಿದೆ. ಕೊನೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಪ್ರತಾಪ್ ಸಿಂಹ ಕನಿಷ್ಠ 2 ಲಕ್ಷಕ್ಕೂ ಹೆಚ್ಚು ದಾಖಲೆಯ ಲೀಡ್ ಗೆಲುವು ಪಡೆಯದಿದ್ದರೆ ಆಗ ನೋಡಿ ಎಂದು ಕೊಡಗಿನ ಕಾಂಗ್ರೆಸ್ಸಿಗರು ಒಳಗೊಳಗೆ ನೊಂದುಕೊಳ್ಳುತ್ತಿದ್ದಾರೆ.