ಮನೆ ರಾಷ್ಟ್ರೀಯ ಕೇರಳ, ತಮಿಳುನಾಡಿನಲ್ಲಿ ಸಿಎಎ ಜಾರಿ ಇಲ್ಲ: ಪಿಣರಾಯಿ ವಿಜಯನ್, ಎಂಕೆ ಸ್ಟಾಲಿನ್ ಘೋಷಣೆ

ಕೇರಳ, ತಮಿಳುನಾಡಿನಲ್ಲಿ ಸಿಎಎ ಜಾರಿ ಇಲ್ಲ: ಪಿಣರಾಯಿ ವಿಜಯನ್, ಎಂಕೆ ಸ್ಟಾಲಿನ್ ಘೋಷಣೆ

0

ಚೆನ್ನೈ/ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸುವುದಿಲ್ಲ ಎಂದು ಕೇರಳ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಸಿಎಎ ಸಂಪೂರ್ಣ ಅನಗತ್ಯ ಕಾನೂನು ಎಂದು ಕರೆದಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ತಮ್ಮ ರಾಜ್ಯದಲ್ಲಿ ಅದನ್ನು ಜಾರಿಗೊಳಿಸುವುದಿಲ್ಲ ಎಂದಿದ್ದಾರೆ.

ಸಿಎಎಯಿಂದ ಯಾವುದೇ ಉಪಯೋಗ ಇಲ್ಲ. ಇದು ಭಾರತೀಯರಲ್ಲಿ ಒಡಕು ಮೂಡಿಸಲು ಮಾತ್ರ ದಾರಿ ಮಾಡಿಕೊಡುತ್ತದೆ. ಸಿಎಎ ಸಂಪೂರ್ಣ ಅನಪೇಕ್ಷಿತ ಎಂಬುವುದು ತಮಿಳುನಾಡು ಸರ್ಕಾರದ ನಿಲುವು. ಈ ಕಾನೂನು ರದ್ದುಗೊಳಿಸಬೇಕು ಎಂದು ಸ್ಟಾಲಿನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಬಹುತ್ವ, ಜಾತ್ಯತೀತತೆ, ಅಲ್ಪಸಂಖ್ಯಾತ ಸಮುದಾಯದವರು ಮತ್ತು ಶ್ರೀಲಂಕಾ ತಮಿಳು ನಿರಾಶ್ರಿತರಿಗೆ ವಿರುದ್ಧವಾದ ಸಿಎಎಯನ್ನು ಜಾರಿಗೆ ತರಲು ತಮಿಳುನಾಡು ಸರ್ಕಾರ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಸ್ಟಾಲಿನ್ ಘೋಷಿಸಿದ್ದಾರೆ. ಕೇರಳದಲ್ಲೂ ಸಿಎಎ ಜಾರಿ ಇಲ್ಲ: ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಮುಸ್ಲಿಂ ಅಲ್ಪಸಂಖ್ಯಾತ ರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇರಳದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಎಲ್‌ಡಿಎಫ್ ಸರ್ಕಾರ ಹಲವಾರು ಬಾರಿ ಹೇಳಿದೆ. ನಾವು ಆ ನಿಲುವನ್ನು ಪುನರುಚ್ಚರಿಸುತ್ತೇವೆ. ಈ ಕೋಮುವಾದ ಮತ್ತು ವಿಭಜಕ ಕಾನೂನನ್ನು ವಿರೋಧಿಸಲು ಕೇರಳ ಒಗ್ಗಟ್ಟಾಗಿ ನಿಲ್ಲುತ್ತದೆ ಹೇಳಿದ್ದಾರೆ. ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಸಿಎಎ ಜಾರಿಗೊಳಿಸುವುದಿಲ್ಲ ಎಂದು ಈಗಾಗಲೇ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿವೆ. ಕೇರಳದಲ್ಲಿ ಆಡಳಿತರೂಡ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ಜಂಟಿಯಾಗಿ ಸಿಎಎ ವಿರುದ್ದ ಹೋರಾಡುವುದಾಗಿ ಘೋಷಿಸಿವೆ. ಈ ಹಿಂದೆಯೂ ಎರಡು ಬಣಗಳು ಒಂದಾಗಿ ಪ್ರತಿಭಟನೆ ನಡೆಸಿತ್ತು.