ಹೆಚ್.ಡಿ.ಕೋಟೆ : ಕುಡಿತದ ಚಟ ಬೆಳೆಸಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿ ಅವಳ ಸಾವಿಗೆ ಕಾರಣನಾಗಿದ್ದರಿಂದ ನ್ಯಾಯಾಲಯ ಆತನಿಗೆ ೩ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೆಚ್.ಡಿ. ಕೋಟೆ ತಾಲ್ಲೂಕು ಯರಹಳ್ಳಿ ಗ್ರಾಮದ ರವಿ ಶಿಕ್ಷೆಗೊಳಗಾದ ವ್ಯಕ್ತಿ. ಈತ ಮೈಸೂರು ತಾಲ್ಲೂಕು ಜಯಪುರ ಹೋಬಳಿ, ಹಾರೋಹಳ್ಳಿ ಗ್ರಾಮದ ರಾಜು ಎಂಬವರ ಮಗಳು ಪ್ರಮೀಳಾ ಎಂಬಾಕೆಯನ್ನು ೧೦ ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದನು. ಇವರಿಗೆ ಮೂವರು ಮಕ್ಕಳು ಇದ್ದಾರೆ.
ರವಿ ತನ್ನ ತಾಯಿ, ತಮ್ಮ, ತಂಗಿ ಮತ್ತು ತಂಗಿಯ ಗಂಡನೊಂದಿಗೆ ವಾಸವಾಗಿದ್ದನು. ಪ್ರಾರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಕ್ರಮೇಣ ರವಿ ಕುಡಿಯುವ ಚಟ ಬೆಳೆಸಿಕೊಂಡು ಹೆಂಡತಿ ಮಕ್ಕಳಿಗೆ ಸರಿಯಾಗಿ ಊಟ ಬಟ್ಟೆ ಕೊಡದೇ ಬೈಯುವುದು ಮತ್ತು ಹೊಡೆಯುವುದು ಮಾಡುತ್ತಿದ್ದನು. ಜತೆಗೆ ಕುಡಿಯಲು ಹೆಂಡತಿ ಬಳಿ ಹಣ ಕೇಳುತ್ತಿದ್ದನು. ಹಣ ಕೊಡದಿದ್ದಾಗ ಹೊಡೆಯುವುದು, ಬಡಿಯುವುದು, ಬೈಯುವುದು ಮಾಡುತ್ತಿದ್ದು, ತವರು ಮನೆಯವರು ಹಲವಾರು ಬಾರಿ ಪಂಚಾಯ್ತಿ ಮಾಡಿ ಬುದ್ದಿ ಹೇಳಿದ್ದರೂ ಸಹ ಬದಲಾವಣೆಯಾಗದೇ ನೀನು ಬದುಕಿರುವುದಕ್ಕಿಂತ ನೇಣು ಹಾಕಿಕೊಂಡು ಸಾಯಿ ಎಂದು ಹಿಂಸೆ ನೀಡಿದ್ದರಿಂದ ದಿನಾಂಕ: ೦೩.೦೨.೨೦೧೯ ರಂದು ಗಂಡನ ಹಿಂಸೆ ತಾಳಲಾರದೇ ಪ್ರಮೀಳಾ ತನ್ನ ಮನೆಯ ಮೇಲ್ಪಾವಣಿಗೆ ಅಳವಡಿಸಿದ್ದ ಜಂತಿಗೆ ವೇಲ್ನಿಂದ ನೇಣು ಹಾಕಿಕೊಂಡು ದಿನಾಂಕ: ೦೪.೦೨.೨೦೧೯ ರಂದು ಮೃತಪಟ್ಟಿದ್ದರು.
ಈ ಬಗ್ಗೆ ಮೃತಳ ತಂದೆ ದೂರು ನೀಡಿದ ಮೇರೆಗೆ ಅಂದಿನ ತನಿಖಾಧಿಕಾರಿ ಆರಕ್ಷಕ ಉಪನಿರೀಕ್ಷಕರಾದ ಮಾದ್ಯಾನಾಯಕ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ಮೈಸೂರು ೫ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಕ್ಷಾಧಾರಗಳನ್ನು ಪರಿಗಣಿಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಅವರು ಆರೋಪ ರುಜುವಾತಾದ ಮೇರೆಗೆ ಭಾರತೀಯ ದಂಡ ಸಂಹಿತೆ ಕಲಂ: ೪೯೮(ಎ) ಅಪರಾಧಕ್ಕೆ ೩ ವರ್ಷ ಕಠಿಣ ಶಿಕ್ಷೆ ಮತ್ತು ೫ ಸಾವಿರ ರೂ. ದಂಡ ಮತ್ತು ಕಲಂ: ೩೦೬ರ ಅಪರಾಧಕ್ಕೆ ೩ ವರ್ಷ ಕಠಿಣ ಶಿಕ್ಷೆ ಮತ್ತು ೫ ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರಿ ಅಭಿಯೋಜಕರಾಗಿ ಬಿ.ಈ ಯೋಗೇಶ್ವರ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.