ಮನೆ ಸುದ್ದಿ ಜಾಲ ಮೈಸೂರನ್ನು ಜಗತ್ತಿನಲ್ಲೇ ನಂ.1 ಸ್ವಚ್ಛ ನಗರವನ್ನಾಗಿ ಮಾಡಬಹುದು: ಸುಭಾಷ್ ಬಿ. ಅಡಿ

ಮೈಸೂರನ್ನು ಜಗತ್ತಿನಲ್ಲೇ ನಂ.1 ಸ್ವಚ್ಛ ನಗರವನ್ನಾಗಿ ಮಾಡಬಹುದು: ಸುಭಾಷ್ ಬಿ. ಅಡಿ

0

ಮೈಸೂರು (Mysuru)- ನಮ್ಮ ಸಾಂಸ್ಕೃತಿಕ, ಐತಿಹಾಸಿಕ ನಗರವನ್ನು ನಮ್ಮ ಪ್ರಯತ್ನಗಳ ಮೂಲಕ ಜಗತ್ತಿನಲ್ಲೇ ನಂ.1 ಸ್ವಚ್ಛ-ಸುಂದರ ನಗರವನ್ನಾಗಿ ಮಾಡಲು ಸಾಧ್ಯವಿದೆ ಎಂದು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಉಪಲೋಕಾಯುಕ್ತರು ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಧ್ಯಕ್ಷರಾದ ಸುಭಾಷ್ ಬಿ. ಅಡಿ ತಿಳಿಸಿದರು.

ಜಿಲ್ಲಾಡಳಿತ, ಮೈಸೂರು ಜಿಲ್ಲೆ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಲಲಿತಮಹಲ್ ರಸ್ತೆಯ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಹೇಮಾವತಿ ಸಭಾಂಗಣದಲ್ಲಿ ಇಂದು ನಡೆದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ “ಘನತ್ಯಾಜ್ಯ ನಿರ್ವಹಣೆ ನಿಯಮಗಳು- 2016” ಅನುಷ್ಠಾನದ ಕುರಿತು ಕಾರ್ಯಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

ಇದು ಮಹಾನಗರ ಪಾಲಿಕೆಯಿಂದ, ಸರ್ಕಾರದಿಂದ ಅಥವಾ ಅಧಿಕಾರಿಗಳಿಂದಲೇ ಮಾಡಬೇಕು ಎಂದುಕೊಂಡರೆ ಸಾಧ್ಯವಿಲ್ಲ. ತ್ಯಾಜ್ಯ ವಸ್ತುಗಳನ್ನು ಹೇಗೆ ನಿಯಂತ್ರಣ ಮಾಡಬೇಕು, ಹಣಕಾಸು ವ್ಯವಸ್ಥೆಯಲ್ಲಿ ಅಂದರೆ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿದುಕೊಂಡರೆ ತ್ಯಾಜ್ಯ ವಸ್ತುಗಳ ನಿಯಂತ್ರಣ ಸಾಧ್ಯವಾಗುತ್ತದೆ ಎಂದರು.


ದೇಶದಲ್ಲಿ ಮೈಸೂರಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಸಾಂಸ್ಕೃತಿಕ ನಗರ, ಜಗತ್ತಿನಲ್ಲೇ ಮಹತ್ವ ಪಡೆದಂತಹ ದಸರಾ ಮಹೋತ್ಸವದ ನಗರ ಕೆಲವು ವರ್ಷಗಳ ಹಿಂದೆ ಮೈಸೂರು ಸುಂದರ-ಸ್ವಚ್ಛ ನಗರ ಎಂಬ ಬಿರುದುಗಳಿಸಿ, ಮಾಲಿನ್ಯ ನಿಯಂತ್ರಣದಲ್ಲಿಯೂ ಹೆಸರುವಾಸಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಮೈಸೂರು ನಗರ ಸ್ವಲ್ಪಮಟ್ಟಿಗೆ ತನ್ನ ಸ್ಥಾನ ಕಳೆದುಕೊಂಡಿದೆ. ಕಾರ್ಯಕ್ರಮದ ಮುಖ್ಯ ಉದ್ದೇಶ ಸಾಂಸ್ಕೃತಿಕ ನಗರವನ್ನು ನಮ್ಮ ಪ್ರಯತ್ನಗಳ ಮೂಲಕ ಜಗತ್ತಿನಲ್ಲಿ ಸುಂದರ ನಗರವನ್ನಾಗಿ ಮಾಡಬಹುದಾದ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.


ನಗರ ಸ್ವಚ್ಛವಾಗುವುದರ ಜೊತೆಗೆ ಮೈಸೂರು ನಗರ ಮಾಲಿನ್ಯ ರಹಿತವಾಗಬೇಕೆಂದರೆ ನಗರದ ಪ್ರತಿಯೊಬ್ಬ ನಾಗರಿಕರ ಸಹಕಾರ ಅತ್ಯವಶ್ಯಕ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ವಾರ್ಡುಗಳು ಸ್ವಚ್ಛವಾಗಿರಬೇಕು ಎಂಬ ಜವಾಬ್ದಾರಿಯನ್ನು ಮೂಡಿಸಬೇಕು. ತಮ್ಮ ತಮ್ಮ ವಾರ್ಡುಗಳಿಂದಲೇ ಈ ಕೆಲಸ ಪ್ರಾರಂಭವಾಗಬೇಕು. ಪ್ರತಿ ವಾರ್ಡ್ ಗಳಲ್ಲಿಯೂ ಘನತ್ಯಾಜ್ಯ ವಸ್ತುಗಳನ್ನು ಹೇಗೆ ಬಳಕೆ ಮಾಡಬೇಕು, ಹೇಗೆ ನಿಯಂತ್ರಣದಲ್ಲಿಡಬೇಕು ಎಂದು ತಿಳಿದುಕೊಂಡು ಶ್ರಮಿಸಿದರೆ ಖಂಡಿತವಾಗಿಯೂ ನಮ್ಮ ಜಿಲ್ಲೆ ದೇಶದ ನಂ.1 ನಗರವಾಗುವುದನ್ನು ಕಾಣಬಹುದು ಎಂದರು.


ಘನತ್ಯಾಜ್ಯ ವಸ್ತುಗಳು ಭೂಮಿಯ ಒಳಗೆ ಸೇರಿದಾಗ ಉತ್ಪತ್ತಿಯಾಗುವ ದ್ರವ ಜಲಮಾಲಿನ್ಯಕ್ಕೆ ಕಾರಣವಾಗುತ್ತದೆ. ಅದೇ ರೀತಿ ತ್ಯಾಜ್ಯ ವಸ್ತುಗಳು ಭೂಮಿಯ ಮೇಲೆ ಸೂರ್ಯನ ಶಾಖದಿಂದ ಉತ್ಪತ್ತಿ ಮಾಡುವ ಅನಿಲ (ಮಿಥೇನ್) ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ನಾವು ಇದನ್ನು ನಿಯಂತ್ರಣ ಮಾಡದಿದ್ದಾಗ ಜಲ ಹಾಗೂ ವಾಯುಮಾಲಿನ್ಯ ಉಂಟಾಗುತ್ತದೆ. ನಮ್ಮ ಆರೋಗ್ಯ, ಪರಿಸರ ಹಾಗೂ ನಗರದ ಸ್ವಚ್ಛತೆಯ ದೃಷ್ಟಿಯಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಇದರ ಮಹತ್ವವನ್ನು ನಾವು ಅರಿತುಕೊಳ್ಳದೆ ಇದ್ದರೆ ಡೆಂಗ್ಯೂ, ಮಲೇರಿಯಾ ಚಿಕ ನ್ ಗುನ್ಯ ಅಥವಾ ಬೇರೆ ಬೇರೆ ರೀತಿಯ ವೈರಾಣು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.


ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಪಾಲಿಕೆಯ ಆರೋಗ್ಯಾಧಿಕಾರಿಗಳಾದ ಡಾ.ಡಿ.ಜಿ. ನಾಗರಾಜ್, ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಎಂ.ಜೆ.ರೂಪ (ಕೆ.ಎ.ಎಸ್), ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಪ್ರೇಮ್ ಕುಮಾರ್ ಹಾಗೂ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.