ಮನೆ ಸ್ಥಳೀಯ ಅಂಚೆ ಮತ ಪತ್ರ ವಿತರಣೆ ಕಾರ್ಯ ವ್ಯವಸ್ಥಿತವಾಗಿರಲಿ: ಕೆ.ವಿ.ರಾಜೇಂದ್ರ

ಅಂಚೆ ಮತ ಪತ್ರ ವಿತರಣೆ ಕಾರ್ಯ ವ್ಯವಸ್ಥಿತವಾಗಿರಲಿ: ಕೆ.ವಿ.ರಾಜೇಂದ್ರ

0

ಮೈಸೂರು :  ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ 85 ವರ್ಷ ಮೀರಿದವರು, ವಿಕಲಚೇತನರು ಮತ್ತು ಕೋವಿಡ್ ಪೀಡಿತರಿಗೆ ವಿತರಿಸಲಾಗುವ ಅಂಚೆಪತ್ರ ಪತ್ರಗಳ ವಿತರಣಾ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು  ನಿರ್ದೇಶನ ನೀಡಿದರು.

ಅವರು ಇಂದು  ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಚೆ ಮತಪತ್ರ ವಿತರಣೆ ಕಾರ್ಯದ ಕುರಿತಂತೆ ಜಿಲ್ಲೆಯಲ್ಲಿನ 85 ವರ್ಷ ಮೀರಿದವರು, ವಿಕಲಚೇತನರು ಮತ್ತು ಕೋವಿಡ್ ಪೀಡಿತರಿಗೆ ಮತಪತ್ರ ವಿತರಣೆ ನೀಡುವ ಕುರಿತು ಮನೆ ಮನೆಗಳಿಗೆ ಭೇಟಿ ನೀಡುವ ಕುರಿತಂತೆ ಸಾಕಷ್ಟು ಮುಂಚಿತವಾಗಿ ಪ್ರಚಾರ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಪ್ರತಿಯೊಬ್ಬರ ಅರ್ಹರ ಮನೆಗಳಿಗೂ ಭೇಟಿ ನೀಡಿ 12 ಡಿ  ಫಾರಂ ವಿತರಿಸಿ, ಒಪ್ಪಿಗೆ ಪತ್ರ ಪಡೆಯುವಂತೆ  ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು

85 ವರ್ಷ ಮೇಲಿನವರಿಗೆ, ಅಂಗವಿಕಲರಿಗೆ ಹಾಗೂ ಕೋವಿಡ್‌ನಿಂದ ಬಾಧಿತರಾದವರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮತದಾರರು ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸಿದಾಗ ‘ಮತದಾನ ಹಬ್ಬ’ ಎನಿಸಿಕೊಳ್ಳುತ್ತದೆ. ಸಾಧ್ಯವಾದಷ್ಟು ಮತಕೇಂದ್ರಗಳಿಗೆ ಹೋಗಿ ಮತದಾನ ಮಾಡಲು ಜನರನ್ನು ಪ್ರೇರೇಪಿಸಬೇಕು. ಮತಕೇಂದ್ರಕ್ಕೆ ಬರಲು ಆಗದವರಿಗೆ ಅಂಚೆ ಮತಪತ್ರ ಕಡ್ಡಾಯವಾಗಿ ವಿತರಣೆ ಮಾಡಿ ಮತದಾನ ಮಾಡುವ ಕ್ರಮಗಳನ್ನು ವಿವರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಒಮ್ಮೆ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದಲ್ಲಿ ಮತಕೇಂದ್ರಕ್ಕೆ ಬಂದು ಮತದಾನ ಮಾಡಲು ಚುನಾವಣಾ ಅಯೋಗವು ಅವಕಾಶ ಕಲ್ಪಿಸುವುದಿಲ್ಲ. ಈ ವಿಷಯವನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು

ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವವರಿಗೆ ಹಾಗೂ ಅಗತ್ಯ ಸೇವೆಗಳಲ್ಲಿ ತೊಡಗಿರುವ ಎಲ್ಲಾ ನೌಕರರು ಈ ಸೌಲಭ್ಯ ಲಭ್ಯವಿದೆ. ಎಲ್ಲರೂ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಚುನಾವಣಾ ಆಯೋಗದ ಸೂಚನೆಯಂತೆ ನಿಗಧಿತ ದಿನಾಂಕದೊಳಗೆ ಅಂಚೆ ಮತಪತ್ರ ವಿತರಣೆ ಮತ್ತು ಒಪ್ಪಿಗೆ ಪತ್ರಗಳನ್ನು ಸಂಗ್ರಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಯಾವುದೇ ಅರ್ಹ ಮತದಾರರು ಈ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಿದರು.

12 ಡಿ ಫಾರಂ ಚುನಾವಣಾ ವೆಬ್ ಸೈಟ್ ನಲ್ಲಿ ಆನ್ ಲೈನ್ ಲಭ್ಯವಿದ್ದು ಅಲ್ಲಿಯೂ ಕೂಡ ಫಾರಂ ಡೋನ್ ಲೋಡ್ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.

85 ವರ್ಷ ಮೇಲಿನವರು ಹಾಗೂ ಶೇ 40ರಷ್ಟು ಅಂಗವೈಕಲ್ಯ ಹೊಂದಿದವರಿಗೆ ಮತದಾರರ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ನೀಡಲಾಗಿದೆ. ಇಂದೇ ಸೆಕ್ಟರ್ ಅಧಿಕಾರಿಗಳು ಮತಗಟ್ಟೆ ಅಧಿಕಾರಿಗಳ ಜೊತೆ ಮನೆ ಮನೆಗೆ ಭೇಟಿ ನೀಡಿ 12 ಡಿ ಫಾರಂ ವಿತರಣೆ ಮಾಡಲು ಅಗತ್ಯ ಕ್ರಮವಹಿಸಬೇಕು. ಪ್ರತಿ ದಿನ ಫಾರಂ ವಿತರಣೆ ಮಾಡಿರುವ ಅಂಕಿಅಂಶಗಳ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ವಿತರಿಸಲಾದ ಅಂಚೆ ಪತ್ರ ಫಾರಂ ಗಳನ್ನು ಮಾರ್ಚ್ 25 ರೊಳಗಾಗಿ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು. ತದಾ ನಂತರ ಬಂದ ಫಾರಂ ಗಳನ್ನು ಪರಿಗಣಿಸುವುದಿಲ್ಲ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಹಾಗೂ ಅಂಚೆ ಪತ್ರ ವಿತರಣೆಗೆ ನಿಯೋಜಿಸಲಾಗಿದ್ದು ವಿವಿಧ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.