ಮನೆ ಅಪರಾಧ ಗೃಹ ಸಾಲ ಕ್ಲಿಯರ್ ಮಾಡಿಸುವುದಾಗಿ ನಂಬಿಸಿ ವ್ಯಕ್ತಿಗೆ 47 ಲಕ್ಷ ವಂಚನೆ

ಗೃಹ ಸಾಲ ಕ್ಲಿಯರ್ ಮಾಡಿಸುವುದಾಗಿ ನಂಬಿಸಿ ವ್ಯಕ್ತಿಗೆ 47 ಲಕ್ಷ ವಂಚನೆ

0

ಬೆಂಗಳೂರು: ಗೃಹ ಸಾಲ ಕ್ಲಿಯರ್ ಮಾಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ನಿರ್ವಿಕ್ ರಾಧೇಶ್ಯಾಮ್ ಮತ್ತು ಗೌರವ್ ಅರೋರ ಎಂಬವರು 47 ಲಕ್ಷ ರೂಪಾಯಿ ವಂಚಿಸಿದ್ದಾಗಿ ಆರೋಪಿಸಿ ಸಂಜಯ್ ಎಂಬುವರು ಕೇಂದ್ರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, FIR ದಾಖಲಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬ್ಯಾಂಕ್​ ಮೂಲಕ ಸಂಜಯ್ ಗೃಹ ಸಾಲ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದ ಮ್ಯೂಚುಯಲ್ ಫ್ರೆಂಡ್ ನಿರ್ವಿಕ್ ರಾಧೆ ಶ್ಯಾಮ್, ತನಗೆ ಬ್ಯಾಂಕ್​ ನ ಹಿರಿಯ ಅಧಿಕಾರಿಗಳು ಪರಿಚಯ ಇದ್ದಾರೆ. ಬ್ಯಾಂಕ್ ಲೋನ್ ಸೆಟಲ್​ ಮೆಂಟ್ ಮಾಡಿಸುವುದಾಗಿ ನಂಬಿಸಿ ಗೌರವ್ ಅರೋರ ಎಂಬಾತನನ್ನ ಬ್ಯಾಕ್ ​ನ ಲೀಗಲ್ ಲಾಯರ್ ಎಂದು ಪರಿಚಯಿಸಿದ್ದನು.

ಲೀಗಲ್ ಫೀಸ್ ಅಂತ ಸಂಜಯ್ ಅವರಿಂದ 3.50 ಲಕ್ಷ ರೂ. ಪಡೆದಿದ್ದ ಆರೋಪಿಗಳು, ಬಳಿಕ ಮುಂಬೈಗೆ ಕರೆಸಿಕೊಂಡು ಸೆಟಲ್ ಮೆಂಟ್ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸಂಜಯ್ ಬ್ಯಾಂಕ್​ ಗೆ ಮರುಪಾವತಿಸಬೇಕಾದ ಹಣವನ್ನು ಗೌರವ್ ಅಕೌಂಟ್​ ಗೆ ಪಾವತಿಸಲು ನಿರ್ವಿಕ್ ಹೇಳಿದ್ದ. ಅದರಂತೆ 47.50 ಲಕ್ಷ ರೂ. ಅನ್ನು ಗೌರವ್ ಅರೋರ ಖಾತೆಗೆ ಪಾವತಿಸಿದ್ದಾರೆ.

ಬಳಿಕ ನಿರ್ವಿಕ್ ಮತ್ತು ಗೌರವ್ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಬಳಿಕ ತಾನು ವಂಚನೆಗೆ ಸಿಲುಕಿರುವುದು ಖಚಿತವಾಗುತ್ತಿದ್ದಂತೆ ಸಂಜಯ್, ಕೇಂದ್ರ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ. ನಿರ್ವಿಕ್ ಮತ್ತು ಗೌರವ್ ಎಂಬವರು ಸುಳ್ಳು ಹೇಳಿ ವಂಚಿಸಿರುವುದಾಗಿ ಸಂಜಯ್ ದೂರಿನಲ್ಲಿ ಆರೋಪಿಸಿದ್ದಾರೆ.