ನವದೆಹಲಿ/ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಚಿತ್ರದುರ್ಗ ಸಮೀಪದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ (ಎಟಿಆರ್) ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್ ಎಲ್ ವಿ) ‘ಪುಷ್ಪಕ್’ ಅನ್ನು ಉಡಾಯಿಸಿ, ನಂತರ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡುವ ಮೂಲಕ ಹೊಸ ಇತಿಹಾಸ ಬರೆಯಿತು.
ಇಸ್ರೋ ಅಧಿಕೃತ ಹೇಳಿಕೆ: ಆರ್ಎಲ್ವಿಯನ್ನು ಬೆಳಿಗ್ಗೆ 7 ಗಂಟೆಗೆ ಚಳ್ಳಕೆರೆ ರನ್ ವೇಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ಆರ್ ಎಲ್ ವಿಯ ಮೂರನೇ ಲ್ಯಾಂಡಿಂಗ್ ಮಿಷನ್ ಆಗಿದೆ. ಇಸ್ರೋ ಈ ಹಿಂದಿನ ಕಾರ್ಯಾಚರಣೆಗಳನ್ನು 2016 ಹಾಗೂ 2023ರ ಏಪ್ರಿಲ್ನಲ್ಲಿ ಯಶಸ್ವಿಯಾಗಿ ನಡೆಸಿತ್ತು. ರಾಮಾಯಣದಲ್ಲಿ ಬರುವ ಪೌರಾಣಿಕ ಬಾಹ್ಯಾಕಾಶ ನೌಕೆಯಂತೆಯೇ (ಆರ್ ಎಲ್ ವಿ) ಪುಷ್ಪಕ್ ಎಂಬ ಹೆಸರನ್ನಿಡಲಾಗಿದೆ.
ಉಡಾವಣಾ ವಾಹನ ‘ಪುಷ್ಪಕ್’ ಅನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸುಮಾರು 4.5 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯಲಾಯಿತು. ನಂತರ ಪೂರ್ವನಿರ್ಧರಿತ ಪಿಲ್ಬಾಕ್ಸ್ ನಿಯತಾಂಕಗಳನ್ನು ಸರಿಯಾಗಿಸಿದ ಬಳಿಕ ಉಡಾವಣೆ ಮಾಡಲಾಗಿದೆ. ಈ ಯೋಜನೆಯು ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದ ಪ್ರವೇಶವನ್ನು ಸಕ್ರಿಯಗೊಳಿಸಲು ಸಂಪೂರ್ಣ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಕ್ಕಾಗಿ ಪೂರಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳ ಭಾಗ ಎಂದು ಇಸ್ರೋ ಹೇಳಿದೆ.
ಬಾಹ್ಯಾಕಾಶ ಪ್ರವೇಶವನ್ನು ಅತ್ಯಂತ ಕೈಗೆಟುಕುವಂತೆ ಮಾಡುವಲ್ಲಿ ಇದು ಭಾರತದ ದಿಟ್ಟ ಹೆಜ್ಜೆ. ಕಕ್ಷೆಯಲ್ಲಿನ ಉಪಗ್ರಹಗಳಿಗೆ ಇಂಧನ ತುಂಬುವುದು, ನವೀಕರಣಕ್ಕಾಗಿ ಕಕ್ಷೆಯಿಂದ ಉಪಗ್ರಹಗಳನ್ನು ಹಿಂಪಡೆಯುವುದನ್ನು ಈ ವಾಹನದ ಮೂಲಕ ಮಡಬಹುದು. ಬಾಹ್ಯಾಕಾಶ ಅವಶೇಷಗಳನ್ನು ಕಡಿಮೆ ಮಾಡಲು ಇದು ಅನುಕೂಲಕಾರಿ ಎಂದು ಇಸ್ರೋ ತಿಳಿಸಿದೆ.