ಮನೆ ರಾಜ್ಯ ಸಿದ್ದರಾಮಯ್ಯರನ್ನು ಹುದ್ದೆಯಿಂದ ಕೆಳಗೆ ಇಳಿಸಲು ಸಂಚು ಹೂಡುವ ಗ್ಯಾಂಗ್ ಕಾಂಗ್ರೆಸ್’ನಲ್ಲೇ ಇದೆ: ಆರ್ ಅಶೋಕ್

ಸಿದ್ದರಾಮಯ್ಯರನ್ನು ಹುದ್ದೆಯಿಂದ ಕೆಳಗೆ ಇಳಿಸಲು ಸಂಚು ಹೂಡುವ ಗ್ಯಾಂಗ್ ಕಾಂಗ್ರೆಸ್’ನಲ್ಲೇ ಇದೆ: ಆರ್ ಅಶೋಕ್

0

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹುದ್ದೆಯಿಂದ ಕೆಳಗೆ ಇಳಿಸಲು ಸಂಚು ಹೂಡುವ ಗ್ಯಾಂಗ್ ಕಾಂಗ್ರೆಸ್ ಪಕ್ಷದಲ್ಲೇ ಇದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಚುನಾವಣಾ ಸಿದ್ದತಾ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ಕಾಂಗ್ರೆಸ್ ಪಕ್ಷದ ಸ್ಥಿತಿಯ ಬಗ್ಗೆ ಈಗಾಗಲೇ ಹೇಳಿದ್ದಾರೆ. ರಾಜ್ಯದಲ್ಲಿ ಸೂಪರ್ ಸಿಎಂ, ಶಾಡೋ ಸಿಎಂ ಬಹಳಷ್ಟು ಮಂದಿ ಇದ್ದಾರೆ. ಬಿಕೆ ಹರಿಪ್ರಸಾದ್ ಕೂಡ ಮಸಾಲತ್ತು ಮಾಡುತ್ತಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್ ನಿಜ ಹೇಳಿದ್ದಾರೆ ಎಂದು ಹೇಳಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸ್ಥಿರ ಸರ್ಕಾರವನ್ನು ಜನ ಬಯಸಿದ್ದಾರೆ. ಅತಂತ್ರ ಕಿಚಡಿ ಸರ್ಕಾರ ಜನರಿಗೆ ಬೇಕಾಗಿಲ್ಲ. ಕರ್ನಾಟಕದಲ್ಲೂ ಕೆಲವು ಬಾರಿ ಕಿಚಡಿ ಸರ್ಕಾರ ಆಗಿತ್ತು. ಆವಾಗಲೆಲ್ಲ ಪಚಡಿ ಆಗಿಹೋಗಿತ್ತು. ಜನರಿಗೆ ಈಗ ಅದು ಬೇಕಾಗಿಲ್ಲ. ಜನ ಸುಭದ್ರ ಸರ್ಕಾರವನ್ನು ಬಯಸುತ್ತಿದ್ದಾರೆ ಎಂದು ಅಶೋಕ್ ಹೇಳಿದರು.

ಐದು ವರ್ಷ ಸುಭದ್ರ ಸರ್ಕಾರ ನೀಡುವ ಸಾಮರ್ಥ್ಯ ಇರುವುದು ರೇಂದ್ರ ಮೋದಿ ಅವರಿಗೆ ಮಾತ್ರ. ಇದನ್ನು ಕರ್ನಾಟಕದ ಜನ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ರಾಜ್ಯದ ಜನ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಆಯ್ಕೆ ಮಾಡುತ್ತಾರೆ ಎಂದು ಅಶೋಕ್ ಭರವಸೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿರುವುದು ಕಾಂಗ್ರೆಸ್ ಪಕ್ಷದ ನಾಲಾಯಕ್ ಸರ್ಕಾರ. ಇದು ಜನರಿಗೆ ದ್ರೋಹ ಮಾಡಿದಂಥ ಸರ್ಕಾರ. ಮೇಕೆದಾಟು ವಿಚಾರದಲ್ಲಿ ದ್ವಂದ್ವ ನೀಲು ಪ್ರದರ್ಶಿಸಿದ ಸರ್ಕಾರ ಇಲ್ಲಿದೆ. ಈ ಸರ್ಕಾರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿಲ್ಲ. ಜನ ಕುಡಿಯುವ ನೀರಿಗೆ ಒದ್ದಾಡುತ್ತಿದ್ದರೂ ಸ್ಪಂದಿಸದ ಸರ್ಕಾರ ಇಲ್ಲಿದೆ. ಈ ಭ್ರಷ್ಟ ಸರ್ಕಾರಕ್ಕೆ ಜನ ಬೆಂಬಲ ನೀಡಲ್ಲ. ಬದಲಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ಅಶೋಕ್ ಹೇಳಿದರು.

ಮಂಡ್ಯ ರಾಜಕಾರಣಕ್ಕೆ ಸಂಬಂಧಿಸಿ ಸಂಸದೆ ಸುಮಲತಾ ಅಧಿಕೃತ ಟಿಕೆಟ್ ಘೋಷಣೆ ಬಳಿಕ ನಿರ್ಧಾರ ಎಂಬ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಅವರು ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದಾರೆ. ಅಲ್ಲಿಯೇ ಅವರ ವಿಚಾರ ತೀರ್ಮಾನ ಆಗಲಿದೆ. ಚೆಂಡು ಕೇಂದ್ರದ ಅಂಗಳದಲ್ಲಿದೆ. ಇಂದು ರಾತ್ರಿ ಅಥವಾ ನಾಳೆ ಟಿಕೆಟ್ ಘೋಷಣೆ ಆಗಲಿದೆ. ಬಿಜೆಪಿ ಜೆಡಿಎಸ್ ಹಾಲು ಜೇನಿನಂತೆ ಒಟ್ಟಾಗಿ ಕೆಲಸ ಮಾಡಲಿವೆ ಎಂದು ಹೇಳಿದರು.