ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ಒದಗಿಸುವ ಪ್ರಕ್ರಿಯೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.
ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಗಳನ್ನು ಒದಗಿಸುವಂತೆ ತಾನು ಒಂದು ವರ್ಷದ ಹಿಂದೆ ನೀಡಿದ್ದ ಆದೇಶವನ್ನು ಇನ್ನೂ ಜಾರಿಗೆ ತರಲಾಗಿಲ್ಲ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
“ಮೊದಲನೆಯದಾಗಿ, ಇಲ್ಲಿಯವರೆಗೆ ಯಾವುದೇ ಪಡಿತರ ಚೀಟಿ ಪಡೆಯದ ಉಳಿದ ನೋಂದಾಯಿತರಿಗೆ ಇ-ಶ್ರಮ್ ಪೋರ್ಟಲ್ ಮೂಲಕ ಪಡಿತರ ಚೀಟಿ ನೀಡುವಂತೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಇಲ್ಲವೇ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವುದು ಸೂಕ್ತ. ಮೇಲೆ ತಿಳಿಸಿದ ಕಾರ್ಯವನ್ನು ರಾಜ್ಯ ಸರ್ಕಾರಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಾರ್ಡ್ ಹೊಂದಿದವರಿಗೆ ಎಲೆಕ್ಟ್ರಾನಿಕ್ ʼನಿಮ್ಮ ಗ್ರಾಹಕರ ಅರಿಯಿರಿʼ (ಇ- ಕೆವೈಸಿ) ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಏಕಕಾಲದಲ್ಲಿ ಮುಂದುವರೆಸಬಹುದು ಎಂದು ಕೂಡ ನ್ಯಾಯಾಲಯ ಹೇಳಿದೆ.
ಪಡಿತರ ಚೀಟಿ ವಿತರಿಸಿದ್ದಕ್ಕೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನ್ಯಾಯಾಲಯಕ್ಕೆ ಅನುಪಾಲನಾ ಅಫಿಡವಿಟ್ ಸಲ್ಲಿಸಬೇಕು. ಕೇಂದ್ರ ಸರ್ಕಾರವು ಕೈಗೊಂಡ ಕಾರ್ಯವನ್ನು ನವೀಕರಿಸುವ ಉದ್ದೇಶಗಳಿಗಾಗಿ ಅನುಪಾಲನಾ ವರದಿಯ ಪ್ರತಿಗಳನ್ನು ಕೇಂದ್ರ ಸರ್ಕಾರದ ಪರ ವಕೀಲರಿಗೆ ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು.
2020 ರ ಕೋವಿಡ್ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ತಾನು ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.
ಪಡಿತರಕ್ಕೆ ಅರ್ಹರಾಗಿರುವ ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ ಕಾರ್ಡ್ ವಿತರಿಸುವಂತೆ ಸುಪ್ರೀಂ ಕೋರ್ಟ್ 2023 ರ ಏಪ್ರಿಲ್‌ನಲ್ಲಿ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.
ವಲಸೆ ಕಾರ್ಮಿಕರಿಗಾಗಿ ಮೀಸಲಾದ ಪೋರ್ಟಲ್‌ನಲ್ಲಿ ನೋಂದಾಯಿಸಿದ ಆದರೆ ಪಡಿತರ ಚೀಟಿಗಳನ್ನು ಪಡೆಯದವರನ್ನು ಈ ಸಂಖ್ಯೆ ಪ್ರತಿಬಿಂಬಿಸುತ್ತದೆ.
ಕಲ್ಯಾಣ ರಾಜ್ಯದಲ್ಲಿ ವಲಸಿಗರು ಆಹಾರ ಧಾನ್ಯಗಳಂತಹ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ನ್ಯಾಯಮೂರ್ತಿಗಳಾದ ಅಮಾನುಲ್ಲಾ ಮತ್ತು ಎಂ ಆರ್ ಶಾ ಅವರಿದ್ದ ಪೀಠ 2023ರ ಏಪ್ರಿಲ್‌ನಲ್ಲಿ ತಿಳಿಸಿತ್ತು.
ಒಟ್ಟು 28.60 ಕೋಟಿ ವಲಸೆ ಕಾರ್ಮಿಕರಲ್ಲಿ ಕೇವಲ 20.63 ಕೋಟಿ ಮಂದಿಯಷ್ಟೇ ನೋಂದಣಿ ಮಾಡಿಸಿಕೊಂಡಿದ್ದು. ವರ್ಷದ ಹಿಂದೆ ತಾನು ನೀಡಿದ್ದ ಆದೇಶದ ಹೊರತಾಗಿಯೂ ಉಳಿದ ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ಲಭ್ಯವಾಗಿಲ್ಲ ಎಂದು ಮಾರ್ಚ್ 19ರಂದು ನ್ಯಾಯಾಲಯ ಹೇಳಿದೆ.
ಪಡಿತರ ಚೀಟಿಗಳನ್ನು ನೀಡುವುದು ರಾಜ್ಯಗಳುಇಲ್ಲವೇ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಟ್ಟದ್ದು ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಹೇಳಿದರು.
ಆಗ ನ್ಯಾಯಾಲಯ ಎರಡು ತಿಂಗಳೊಳಗೆ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಕಾರ್ಯ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿತು. ಪ್ರಕರಣದ ವಿಚಾರಣೆ ಜುಲೈ 16ರಂದು ನಡೆಯಲಿದೆ.