ಮನೆ ರಾಜ್ಯ ‘ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು’: ಶಿವರಾಜ್ ತಂಗಡಗಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

‘ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು’: ಶಿವರಾಜ್ ತಂಗಡಗಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

0

ಬೆಂಗಳೂರು: ವಿದ್ಯಾರ್ಥಿಗಳು, ಯುವಕರು ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗವು ಸೋಮವಾರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ರಾಜ್ಯ ವಕ್ತಾರ ಹೆಚ್.ವೆಂಕಟೇಶ್ ದೊಡ್ಡೇರಿ, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಮತ್ತಿತರ ಪ್ರಮುಖರು ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದರು.

ಶಿವರಾಜ್ ತಂಗಡಗಿ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾತನಾಡುತ್ತಾ, ಚುನಾವಣೆಯಲ್ಲಿ ಮತ ಕೇಳಲು ಇವರಿಗೆ ನಾಚಿಕೆಯಾಗಬೇಕು. ವಿದ್ಯಾರ್ಥಿಗಳು, ಯುವಕರು ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು ಎಂದು ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಎತ್ತಿಕಟ್ಟಿ, ದ್ವೇಷ ಭಾವನೆ ಮೂಡುವಂತೆ ಮಾಡಿ ಮತದಾರರ ಮೇಲೆ ಹಲ್ಲೆ ಮಾಡುವಂತೆ ಪ್ರಚೋದಿಸಿದ್ದಾರೆ. ಇಂತಹ ಹೇಳಿಕೆಯಿಂದ ಮತದಾರರು ಮತದಾನದಿಂದ ದೂರ ಉಳಿಯುವ ಸಾಧ್ಯತೆ ಇದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಹೀಗಾಗಿ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಬಿಜೆಪಿ ಕೋರಿದೆ.

ಶಿವರಾಜ್ ತಂಗಡಗಿ ಹೇಳಿದ್ದೇನು ?:

ಕೊಪ್ಪಳದ ಕಾರಟಗಿಯಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಶಿವರಾಜ್ ತಂಗಡಗಿ, “ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಹಾಗೆ ನೋಡಿದರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು. ಏನಾಗಿದೆ ಇವತ್ತು ಉದ್ಯೋಗ ನೀಡಿದ್ದಾರಾ? ಇಲ್ಲವಲ್ಲ. ಆದರೂ ಇನ್ನೂ ಯುವಕರು, ವಿದ್ಯಾರ್ಥಿಗಳು ಮೋದಿ ಮೋದಿ ಅಂದ್ರೆ ಕಪಾಳಕ್ಕೆ ಹೊಡೀಬೇಕು” ಎಂದಿದ್ದರು.