ಮನೆ ಸುದ್ದಿ ಜಾಲ ಪ್ರಾಣಿಬಲಿ: 23 ಮಂದಿಯ ವಿರುದ್ಧ ಪ್ರಕರಣ ದಾಖಲು

ಪ್ರಾಣಿಬಲಿ: 23 ಮಂದಿಯ ವಿರುದ್ಧ ಪ್ರಕರಣ ದಾಖಲು

0
ಸಾಂದರ್ಭಿಕ ಚಿತ್ರ

ತುಮಕೂರು(Tumkur): ಪಾವಗಡ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದ ಚೌಡೇಶ್ವರಿ ದೇವಿಗೆ ಮಂಗಳವಾರ ಗ್ರಾಮದ ಹೊರವಲಯದಲ್ಲಿ ಪ್ರಾಣಿ ಬಲಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು,  ಈ ಸಂಬಂಧ 23 ಮಂದಿಯ ವಿರುದ್ಧ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಣಿವಧೆ ಮಾಡಿದ ಬೆಳ್ಳಿಬಟ್ಟಲು ಗ್ರಾಮದ ಗೋಪಿ, ಬದ್ರಿ, ಕೃಷ್ಣಪ್ಪ ಸೇರಿದಂತೆ ಸ್ಥಳದಲ್ಲಿದ್ದ ಗ್ರಾಮದ 23 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಎತ್ತುಗಳ ಬಲಿಗೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಈ ಗ್ರಾಮದ ಕೆಲವರು ಪ್ರಾಣಿ ಬಲಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಗ್ರಾಮದ ಹೊರವಲಯದ ಜಮೀನಿನಲ್ಲಿ ರಹಸ್ಯವಾಗಿ ಎರಡು ಎತ್ತುಗಳನ್ನು ಬಲಿ ನೀಡಲಾಗಿತ್ತು.

ಪ್ರಕರಣ ಬಯಲಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಈ ವೇಳೆ ಪ್ರಾಣಿ ಬಲಿಗೆ ಬಳಸಿದ ಕಠಾರಿ, ಎತ್ತುಗಳ ಕೊಂಬು, ಮಾಂಸ ಕತ್ತರಿಸಲು ಬಳಸಿದ ಮರದ ದಿಮ್ಮಿಗಳು ಪತ್ತೆಯಾಗಿವೆ.

ಈ ಹಿಂದೆ ಗ್ರಾಮದಲ್ಲಿ ಕೋಣ ಬಲಿ ನೀಡುವುದರ ವಿರುದ್ಧ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಕೋಣದ ಬದಲಾಗಿ ಬೇರೆ ಪ್ರಾಣಿಗಳನ್ನು ಬಲಿ ನೀಡುವಂತೆ 2007 ರಲ್ಲಿ ಜಿಲ್ಲಾಧಿಕಾರಿ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಕೋಣದ ಬದಲು ಎರಡು ಎತ್ತುಗಳನ್ನು ಬಲಿ ನೀಡಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.