ಮನೆ ರಾಜ್ಯ ಗುಜರಿ ಸಾಮಗ್ರಿಗಳಿಗೆ ಆಕಸ್ಮಿಕ ಬೆಂಕಿ: 2 ಲಕ್ಷ ರೂ. ಮೌಲ್ಯದ ಸಾಮಗ್ರಿ ಬೆಂಕಿಗಾಹುತಿ

ಗುಜರಿ ಸಾಮಗ್ರಿಗಳಿಗೆ ಆಕಸ್ಮಿಕ ಬೆಂಕಿ: 2 ಲಕ್ಷ ರೂ. ಮೌಲ್ಯದ ಸಾಮಗ್ರಿ ಬೆಂಕಿಗಾಹುತಿ

0

ಮುದ್ದೇಬಿಹಾಳ: ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ತಂಗಡಗಿ ರಸ್ತೆ ಪಕ್ಕದ ಲಕ್ಷ್ಮೀ ಚಿತ್ರಮಂದಿರ ಹಿಂಭಾಗ ಇದ್ದ ಗುಜರಿ ಸಾಮಗ್ರಿಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಅಂದಾಜು 2 ಲಕ್ಷ ರೂ. ಮೌಲ್ಯದ ಸಾಮಗ್ರಿ ಬೆಂಕಿಗಾಹುತಿಯಾದ ಘಟನೆ ಮಾ. 27ರ ಬುಧವಾರ ಮದ್ಯಾಹ್ನ 12 ಗಂಟೆಗೆ ನಡೆದಿದೆ.

ಸ್ಥಳೀಯರು ಟ್ಯಾಂಕರ್ ಮುಖಾಂತರ ನೀರು ತಂದು ಬೆಂಕಿಯ ಕೆನ್ನಾಲಿಗೆ ವ್ಯಾಪಿಸುವುದನ್ನು ತಡೆಯಲು ಹರಸಾಹಸ ಪಟ್ಟಿದ್ದಾರೆ. ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದಾಗ ಅಲ್ಲಿದ್ದ ವಾಹನಗಳು ಬೇರೊಂದು ಕಡೆ ಅಗ್ನಿ ಅವಘಡ ನಿಯಂತ್ರಿಸಲು ತೆರಳಿದ್ದವು. ಹೀಗಾಗಿ ತಾಳಿಕೋಟೆ ಠಾಣೆಯವರಿಗೆ ಕರೆ ಮಾಡಿದಾಗ ಅಗ್ನಿಶಾಮಕ ಲಬ್ಯವಿರುವುದನ್ನರಿತು ತಕ್ಷಣ ಮುದ್ದೇಬಿಹಾಳಕ್ಕೆ ಕಳಿಸಿಕೊಡಲು ತಿಳಿಸಲಾಯಿತು.

15-20 ನಿಮಿಷದೊಳಗೆ ಆಗಮಿಸಿದ ವಾಹನ ಮತ್ತು ಅಲ್ಲಿನ ಸಿಬ್ಬಂದಿ ಇಲ್ಲಿನ ಸಿಬ್ಬಂದಿಯ ಸಹಕಾರದೊಂದಿಗೆ ಅಂದಾಜು ಒಂದು ಗಂಟೆ ಸತತ ಪ್ರಯತ್ನ ನಡೆಸಿ ಬೆಂಕಿ ನಂದಿಸಲಾಯಿತು. ಅಷ್ಟೊತ್ತಿಗೆ ಮುದ್ದೇಬಿಹಾಳ ವಾಹನವೂ ಇವರೊಂದಿಗೆ ಸೇರಿಕೊಂಡು ಕಾರ್ಯಾಚರಣೆಗಿಳಿಯಿತು.

ಇದಕ್ಕೂ ಮುನ್ನ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ಬೆಂಕಿ ಬೇರೆಡೆ ಹರಡುವುದನ್ನು ನಿಯಂತ್ರಿಸಲು ಮುಂದಾದಾಗ ಬೆಂಕಿಯ ಕಿಡಿ ಅವರು ತೊಟ್ಡಿದ್ದ ಖಾಕಿ ಶರ್ಟ್ ಮೇಲೆ ಬಿದ್ದು ಸ್ವಲ್ಪ ಭಾಗ ಸುಟ್ಟು ಹೋಯಿತು. ಬೆಂಕಿ ನೋಡಲು ಮುಗಿಬಿದ್ದ ಸಾರ್ಬಜನಿಕರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಬೇಕಾಯಿತು.

ಘಟನೆ ಕುರಿತು ಗುಜರಿ ಮಾಲಿಕ ಲಾಳೇಸಾಬ ಮ್ಯಾಗೇರಿ ಮಾತನಾಡಿ, ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು. ಗುಜರಿ ರೂಪದಲ್ಲಿ ಸಂಗ್ರಹಿಸಿದ್ದ ಪ್ಲಾಸ್ಟಿಕ್, ರಟ್ಟು ಮತ್ತಿತರ ವಸ್ತುಗಳು ಬೆಂಕಿಗೆ ಅಹುತಿಯಾಗಿ ಅಂದಾಜು 2 ಲಕ್ಷ ರೂ. ಹಾನಿಯಾಗಿದ್ದಾಗಿ ತಿಳಿಸಿದರು.

ಏಕಾಏಕಿ ಭಾರೀ ಪ್ರಮಾಣದಲ್ಲಿ ಬೆಂಕಿ, ಹೊಗೆ ಕಾಣಿಸಿಕೊಂಡು ಅಕ್ಕಪಕ್ಕದ ಅಂಗಡಿ, ಬೇಕರಿ, ಮನೆ ಮುಂತಾದೆಡೆ ಹರಡಿತ್ತು. ಸಕಾಲಕ್ಕೆ ನಿಯಂತ್ರಿಸದಿದ್ದರೆ ಸುತ್ತಲಿಯ ಎಲ್ಲವೂ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ಹಾನಿ ಸಂಭವಿಸುವ ಆತಂಕ ಇತ್ತು.