ಮೈಸೂರು: ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಕಾಂಗ್ರೆಸ್ ನಾಯಕರು ಗುರುವಾರ ಭೇಟಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದಂತೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ನೇತೃತ್ವದ ಕಾಂಗ್ರೆಸ್ ನಾಯಕರ ತಂಡವು ಜಯಲಕ್ಷ್ಮೀಪುರಂನಲ್ಲಿರುವ ವಿ.ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಮೂರ್ತಿ ಈ ಸಂದರ್ಭದಲ್ಲಿ ಇದ್ದರು.
ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ”ಶ್ರೀನಿವಾಸಪ್ರಸಾದ್ ಅವರು ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಶುಭ ಕೋರಲು ಬಂದಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ” ಎಂದರು.
ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ತೊಂದರೆಯಾದಾಗಲೆಲ್ಲ ಅವರು ಹೋರಾಟ ಮಾಡಿದ್ದಾರೆ. ಕೆಲವು ರಾಜಕೀಯ ಕಾರಣದಿಂದ ನಾವು ಶ್ರೀನಿವಾಸಪ್ರಸಾದ್ ದೂರ ಆಗಿದ್ದೆವು. ಆ ಸಂದರ್ಭದಲ್ಲಿ ನಾವು ಅವರನ್ನು ಸೋಲಿಸಿದ್ದೆವು, ಅವರು ನಮ್ಮನ್ನು ಸೋಲಿಸಿದರು. ಹಾಗಂತ ನಾವು ರಾಜಕೀಯ ಶತ್ರುಗಳಲ್ಲ. ರಾಜಕೀಯವಾಗಿ ಅಷ್ಟೇ ನಮ್ಮ ವಿರೋಧಗಳು ಇದ್ದವು. ನಾವು ಪರಸ್ಪರ ಗೌರವದಿಂದಲೇ ಇದ್ದೇವೆ ಎಂದು ಹೇಳಿದರು.
ನಂತರ ವಿ. ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಎಲ್ಲರಂತೆ ಕಾಂಗ್ರೆಸ್ ನಾಯಕರು ನನ್ನನ್ನು ಬಂದು ಭೇಟಿ ಮಾಡಿದ್ದಾರೆ. ನಾನು ರಾಜಕೀಯವಾಗಿ ಈಗ ಯಾರನ್ನೂ ಬೆಂಬಲಿಸುವುದಿಲ್ಲ. ನನ್ನ ಅಭಿಮಾನಿಗಳು ಅವರ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ. ನಾನು ರಾಜಕೀಯವಾಗಿ ಯಾವ ನಿರ್ಧಾರವನ್ನೂ ಹೇಳುವುದಿಲ್ಲ. ಮೊನ್ನೆ ಬಿಜೆಪಿ ಮತ್ತು ಬಿಎಸ್ಪಿಯವರು ಬಂದಿದ್ದರು. ಇವತ್ತು ಕಾಂಗ್ರೆಸ್‌ನವರು ಬಂದಿದ್ದಾರೆ. ಇದಕ್ಕೆ ಹೆಚ್ಚಿನ ಮಹತ್ವ ನೀಡುವುದು ಬೇಡ ಎಂದರು.
ಬುಧವಾರ ರಾತ್ರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಕೂಡ ವಿ.ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದುಕೊಂಡಿದ್ದರು.