ಮನೆ ರಾಜ್ಯ ಕೆ.ವಿ. ಗೌತಮ್​ ಅವರಿಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್

ಕೆ.ವಿ. ಗೌತಮ್​ ಅವರಿಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್

0

ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಕಾಂಗ್ರೆಸ್​​ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮಾಜಿ ಮೇಯರ್​ ವಿಜಯ್​ ಕುಮಾರ್​ ಅವರ ಪುತ್ರ ಕೆ.ವಿ. ಗೌತಮ್​ ಅವರಿಗೆ ನೀಡಿದೆ.

Join Our Whatsapp Group

ಕೊನೆಯದಾಗಿ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್​​ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಕೋಲಾರ ಕಾಂಗ್ರೆಸ್​ ಘಟಕದಲ್ಲಿ ಮಾಜಿ ಸಭಾಪತಿ ರಮೇಶ್​ ಕುಮಾರ್ ಮತ್ತು ಕೆ.ಹೆಚ್​ ಮುನಿಯಪ್ಪ ಎರಡು ಬಣಗಳಿವೆ. ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಕೆ.ಹೆಚ್​ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣನಿಗೆ ನೀಡುವುದು ಪಕ್ಕಾ ಅಂತ ತಿಳಿಯುತ್ತಿದ್ದಂತೆ ರಮೇಶ್​ ಕುಮಾರ್​ ಬಣದ ನಾಯಕರು ಅಸಮಾಧಾನಗೊಂಡು ಬಂಡಾಯವೆದ್ದಿದ್ದರು.  ಒಂದು ವೇಳೆ ಕೆ.ಹೆಚ್​ ಮುನಿಯಪ್ಪ ಕಡೆಯವರಿಗೆ ಟಿಕೆಟ್​ ನೀಡಿದರೆ ಸಾಮೂಹಿಕವಾಗಿ ರಾಜಿನಾಮೆ ನೀಡುತ್ತೇವೆ ಎಂದು ರಮೇಶ್​ ಕುಮಾರ್​ ಬಣದ ಐದು ಜನ ಶಾಸಕರು ಸಿದ್ದವಾಗಿದ್ದರು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮಧ್ಯಸ್ಥಿಕೆ ವಹಿಸಿ ಅಸಮಾಧಾನಿತ ಶಾಸಕರನ್ನು ಸಮಾಧಾನ ಮಾಡಿದರು. ಇದೀಗ ಎರಡೂ ಬಣದವರನ್ನು ಹೊರತು ಪಡಿಸಿ ಮೂರನೇದವರಿಗೆ ಟಿಕೆಟ್​ ನೀಡಲಾಗಿದೆ.

ರಾಜ್ಯದ ಐದು ಪರಿಶಿಷ್ಟ ಜಾತಿಯ ಲೋಕಸಭಾ ಕ್ಷೇತ್ರಗಳಲ್ಲಿ ಕೋಲಾರ ಕ್ಷೇತ್ರ ಕೂಡ ಒಂದು. ಕಾಂಗ್ರೆಸ್ ​ ಮೊದಲಿನಿಂದಲೂ ಎರಡು ಕ್ಷೇತ್ರದ ಟಿಕೆಟ್​ ದಲಿತ ಬಲಗೈ, ಎರಡು ಕ್ಷೇತ್ರದ ಟಿಕೆಟ್​ ಎಡಗೈ ಹಾಗೂ ಒಂದು ಭೋವಿ ಅಥವಾ ಲಂಬಾಣಿ ಸಮುದಾಯಕ್ಕೆ ನೀಡುತ್ತಾ ಬಂದಿದೆ. ಆದರೆ ಕಾಂಗ್ರೆಸ್ ಈ ಬಾರಿ ​ವಿಜಯಪುರ, ಕಲಬುರಗಿ ಕ್ಷೇತ್ರದ ಟಿಕೆಟ್​ ಅನ್ನು ಬಲ ಸಮುದಾಯವರಿಗೆ ನೀಡಿದೆ. ಇನ್ನು ಚಾಮರಾಜನಗರದಲ್ಲೂ ಬಲಗೈ ಸಮುದಾಯದ ಡಾ.ಹೆಚ್​.ಸಿ ಮಹದೇವಪ್ಪ ಪುತ್ರ ಸುನಿಲ್​ ಬೋಸ್​ಗೆ ಟಿಕೆಟ್​ ನೀಡಿದೆ.

ಕೆ.ವಿ.ಗೌತಮ್ ಬೆಂಗಳೂರಿನ ಮಾಜಿ‌ ಮೇಯರ್ ಕೆ.ವಿಜಯಕುಮಾರ್ ಅವರ ಮಗ. ಕೋಲಾರ ಮೂಲದವರಾದ ಇವರು ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದಾರೆ. ಕೆ ವಿಜಯಕುಮಾರ್ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಪಕ್ಷದ ಸಂಘಟನೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪುತ್ರನನ್ನು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಸಿದೆ.