ಶ್ರೀವಿಜಯದಾಸರ ಕುರಿತಾದ “ದಾಸವರೇಣ್ಯ ಶ್ರೀವಿಜಯದಾಸರು’ ಚಿತ್ರ ಏಪ್ರಿಲ್ 12 ರಂದು ತೆರೆಗೆ ಬರಲಿದೆ. ಈ ಚಿತ್ರವನ್ನು ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿದ್ದಾರೆ.
ಚಿತ್ರದ ಬಿಡುಗಡೆ ಕುರಿತು ಮಾತನಾಡಿದ ಅವರು, “ಕರ್ನಾಟಕದ ಶ್ರೇಷ್ಠ ಹರಿದಾಸರಾದ ವಿಜಯದಾಸರ ಕುರಿತಾದ ದಾಸವರೇಣ್ಯ ಶ್ರೀವಿಜಯದಾಸರು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಎಸ್ ಪಿ ಜೆ ಮೂವೀಸ್ ಲಾಂಛನದಲ್ಲಿ ತ್ರಿವಿಕ್ರಮ ಜೋಶಿ ಅವರು ಈ ಚಿತ್ರವನ್ನು ನಿರ್ಮಿಸುವುದರೊಂದಿಗೆ ವಿಜಯದಾಸರ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ವಿಜಯದಾಸರ ಪತ್ನಿ ಅರಳಮ್ಮನ ಪಾತ್ರದಲ್ಲಿ ಶ್ರೀಲತ ಅಭಿನಯಿಸಿದ್ದಾರೆ. ಪ್ರಭಂಜನ ದೇಶಪಾಂಡೆ, ವಿಜಯಾನಂದ ನಾಯಕ್, ಮಾಜಿ ಶಾಸಕರಾದ ಬಸವನಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ’ ಎಂದು ಚಿತ್ರದ ವಿವರ ನೀಡಿದರು.
ಈ ಚಿತ್ರವನ್ನು ತ್ರಿವಿಕ್ರಮ ಜೋಶಿ ನಿರ್ಮಿಸಿ, ನಟಿಸಿದ್ದಾರೆ. ಈಗಾಗಲೇ ಸಿನಿಮಾ ಮೂಡಿಬಂದಿರುವ ರೀತಿ ಬಗ್ಗೆ ಅವರು ಖುಷಿಯಾಗಿದ್ದು, ವಿದೇಶಗಳಲ್ಲೂ ಜನ ಈ ಸಿನಿಮಾವನ್ನು ನೋಡಲು ಕಾತುರರಾಗಿದ್ದಾರೆ ಎನ್ನುವುದು ಅವರ ಮಾತು. “ನಾನು ಮೂಲತಃ ಇಂಜಿನಿರ್ಯ ಹಾಗೂ ಉದ್ಯಮಿ. ಹಲವು ವರ್ಷಗಳಿಂದ ರಾಜಕೀಯದಲ್ಲೂ ಸಕ್ರಿಯನಾಗಿದ್ದೇನೆ. ದಾಸವರೇಣ್ಯ ಶ್ರೀವಿಜಯದಾಸರು ಚಿತ್ರವನ್ನು ನಿರ್ಮಾಣ ಮಾಡಿ, ವಿಜಯದಾಸರ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ.
ದುಡ್ಡು ಮಾಡುವ ಚಿತ್ರ ಮಾಡದೇ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ನೀಡುವ ಹಂಬಲದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ಈ ಹಿಂದೆ ಶ್ರೀಜಗನ್ನಾಥದಾಸರು ಚಿತ್ರ ತೆರೆಕಂಡಾಗ ಜನರು ಭಕ್ತಿಪರವಶರಾಗಿ ಚಿತ್ರ ನೋಡಿದ್ದನ್ನು ಕಂಡಿದ್ದೇನೆ. ಈ ಚಿತ್ರಕ್ಕೂ ಈಗಾಗಲೇ ವಿದೇಶದಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ’ ಎನ್ನುವುದು ಜೋಶಿ ಅವರ ಮಾತು