ಮನೆ ಸ್ಥಳೀಯ ನನಗೆ ಮರ್ಯಾದೆ ಕೊಡಬೇಕೆಂದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಲಕ್ಷ್ಮಣ್ ಅವರಿಗೆ ಅತಿ ಹೆಚ್ಚು ಲೀಡ್ ಕೊಡಿ: ಸಿಎಂ...

ನನಗೆ ಮರ್ಯಾದೆ ಕೊಡಬೇಕೆಂದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಲಕ್ಷ್ಮಣ್ ಅವರಿಗೆ ಅತಿ ಹೆಚ್ಚು ಲೀಡ್ ಕೊಡಿ: ಸಿಎಂ ಸಿದ್ದರಾಮಯ್ಯ ಕರೆ

0

ಮೈಸೂರು ಏ 2: 1977ರ ಬಳಿಕ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಒಕ್ಕಲಿಗರೊಬ್ಬರು ಗೆಲ್ಲಲಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಒಲವು ಇದೆ. ಮೋದಿ ಅಲೆ ದುರ್ಬೀನು ಹಾಕಿ ಹುಡುಕಿದರೂ ಕಾಣುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಚಿತವಾಗಿ ನುಡಿದರು.

Join Our Whatsapp Group

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ನಮ್ಮದೇ ತಪ್ಪುಗಳಿಂದ ಕೈತಪ್ಪಿದೆ. ಈಗಲೂ ಚಾಮುಂಡೇಶ್ವರಿ ಜನ ನಮ್ಮ ಪರವಾಗಿದ್ದಾರೆ. ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದು ನಮಗೆ ಗೊತ್ತಿದೆ. ಕ್ಷೇತ್ರದ ಮತದಾರರು ನಮ್ಮ ಪರವಾಗಿದ್ದಾರೆ, ನಾವು ನಮ್ಮ ಕ್ಷೇತ್ರದ ಪರವಾಗಿ ನಿಲ್ಲಬೇಕು. ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಾಮರ್ಥ್ಯ ತೋರಿಸಬೇಕು ಎಂದು ಕರೆ ನೀಡಿದರು.

2013-18 ರ ವರೆಗೆ ನಾನು ಮುಖ್ಯಮಂತ್ರಿಯಾಗಿ ಎಷ್ಟು ಕೆಲಸ ಮಾಡಿದ್ದೆ. ಇಡೀ ರಾಜ್ಯದಲ್ಲಿ ಅನ್ನಭಾಗ್ಯದಿಂದ ರೈತರ ಸಾಲಮನ್ನಾವರೆಗೂ ಎಷ್ಟೆಷ್ಟು ಕೆಲಸ ಮಾಡಿದ್ವಿ. ಆದರೂ ನಮಗೆ 2018 ರಲ್ಲಿ ಹಿನ್ನಡೆಯಾಗಿದ್ದು ನೋವು ತಂದಿದೆ ಎಂದು ಭಾವನಾತ್ಮಕವಾಗಿ ನುಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಜನತೆ ತೀರ್ಮಾನ ಮಾಡಿದರೆ ಬಿಜೆಪಿ ಕತೆ ಮುಗಿಯತ್ತೆ: ಸಿ.ಎಂ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಇಲ್ಲಿ ಬಿಜೆಪಿ ಠೇವಣಿಯನ್ನು ಕಳೆದುಕೊಂಡಿರುವ ಉದಾಹರಣೆಯೇ ಹೆಚ್ಚು. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಕೆಲಸಗಳು ಕಣ್ಣಿಗೆ ಕಾಣುತ್ತಿವೆ‌. ಆದ್ದರಿಂದ ಚಾಮುಂಡೇಶ್ವರಿ ಕ್ಷೇತ್ರದ ಜನ ತೀರ್ಮಾನ ಮಾಡಿದರೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕತೆ ಮುಗಿಯತ್ತೆ ಎಂದರು.

ಆದ್ದರಿಂದ ನನಗೆ ಮರ್ಯಾದೆ ಕೊಡಬೇಕೆಂದರೆ ಚಾಮುಂಡೇಶ್ವರಿಯಲ್ಲಿ ಲೋಕಸಭೆಗೆ ಅತಿ ಹೆಚ್ಚು ಲೀಡ್ ಕೊಡಿಸಿ ಎಂದು ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು.