ಮನೆ ರಾಜ್ಯ ಒಂದು ವಾರ ರಾಜ್ಯದಲ್ಲಿ ಬಿಸಿ ಗಾಳಿ:  ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ

ಒಂದು ವಾರ ರಾಜ್ಯದಲ್ಲಿ ಬಿಸಿ ಗಾಳಿ:  ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ

0

ಬೆಂಗಳೂರು: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಸಿಗಾಳಿಯ ಪರಿಣಾಮ ತಟ್ಟಲಿದ್ದು, ಇನ್ನೂ ಒಂದು ವಾರಗಳ ಕಾಲ ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಏಪ್ರಿಲ್​​ ಮೊದಲ ಮತ್ತು ಎರಡನೇ ವಾರದಲ್ಲಿ ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಗಾಳಿಯ ಎಫೆಕ್ಟ್ ತಟ್ಟುವ ಸಾಧ್ಯತೆ ಇದೆ.

Join Our Whatsapp Group

ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗರಿಷ್ಠ ತಾಪಮಾನ ಮಾತ್ರವಲ್ಲದೇ, ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಬುಧವಾರ 37.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಗುರುವಾರ ಬರೋಬ್ಬರಿ 38 ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ. ಬರಗಾಲ, ಜಲಕ್ಷಾಮಕ್ಕೆ ಸಿಲುಕಿ ತತ್ತರಿಸುತ್ತಿರುವ ನಗರಕ್ಕೆ ಇದರಿಂದ ಮತ್ತೊಂದು ಆಘಾತ ಎದುರಾಗಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿ ಮತ್ತು ಆದ್ರತೆಯ ಪರಿಸ್ಥಿತಿಗಳು ಏರಿಕೆ ಆಗುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ಬಾಗಲಕೋಟೆ ಬೆಳಗಾವಿ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು 2 ಡಿಗ್ರಿ ಸೆಲ್ಸಿಯಸ್​ಗೆ ಏರಲಿದೆ. ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಹಾಸನ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮೂರು ದಿನ ಬೆಚ್ಚನೆಯ ರಾತ್ರಿಗಳು ಇರಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೈ ಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡಬಾರದು. ದೇಹದ ಉಷ್ಣತೆಯು 40 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ. ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಇದ್ದು, ಇದು ಜೀವಕ್ಕೆ ಕುತ್ತು ತರಲಿದೆ. ಹೀಗಾಗಿ, ಮುಂದಿನ ಕೆಲವು ದಿನ ತಾಪಮಾನ ಇಳಿಕೆಯವರೆಗೂ ಬೆಳಗ್ಗೆ 11 ರಿಂದ ಮಧ್ಯಾಹ್ನ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದಿರುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.