ಮನೆ ಕಾನೂನು ಹಣ ಪಡೆದು ಸೈಟು ಕೊಡದ ಸಂಸ್ಥೆಗೆ ಕೋರ್ಟ್ ಚಾಟಿ: ಬಡ್ಡಿ ಸಹಿತ ಹಣ ಹಿಂದಿರುಗಿಸಲು ಆದೇಶ

ಹಣ ಪಡೆದು ಸೈಟು ಕೊಡದ ಸಂಸ್ಥೆಗೆ ಕೋರ್ಟ್ ಚಾಟಿ: ಬಡ್ಡಿ ಸಹಿತ ಹಣ ಹಿಂದಿರುಗಿಸಲು ಆದೇಶ

0

ಬೆಂಗಳೂರು: ಸೈಟು ಕೊಡುವುದಾಗಿ ಭರವಸೆ ನೀಡಿ ಹಣ ಪಡೆದು ಆ ಬಳಿಕ ನಿವೇಶನವನ್ನೂ ನೀಡದೆ ಹಣವನ್ನೂ ನೀಡದೆ ಸತಾಯಿಸಿದ್ದ ಸಹಕಾರ ಸಂಘಕ್ಕೆ ಚಾಟಿ ಬೀಸಿರುವ ಗ್ರಾಹಕ ಕೋರ್ಟ್ ಕೂಡಲೇ ಹಣವನ್ನು ಬಡ್ಡಿ ಸಹಿತ ಪಾವತಿಸುವಂತೆ ಆದೇಶಿಸಿದೆ.

Join Our Whatsapp Group

ವಿಜಯನಗರ ನಿವಾಸಿ ಜೇಕಬ್ ಈಸೋವ್ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಈ ಆದೇಶ ನೀಡಿದೆ.

ಕೋರ್ಟ್ ತನ್ನ ಆದೇಶದಲ್ಲಿ, “ಟೆಲಿಕಾಂ ಅಂಡ್ ಗೌವರ್ನಮೆಂಟ್ ಎಂಪ್ಲಾಯೀಸ್ ವೆಲ್ ಫೇರ್ ಹೌಸಿಂಗ್ ಕೋ ಆಪರೇಟಿವ್  ಸೊಸೈಟಿಯು 2015 ರಲ್ಲಿ ನಿವೇಶನ ನೀಡುವುದಾಗಿ ಹೇಳಿ ಅರ್ಜಿದಾರರಿಂದ ಹಣ ಪಡೆದಿದೆ. ಆದರೆ, ನಿವೇಶನ ನಿರ್ಮಾಣಕ್ಕೆ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿಯನ್ನೇ ಪಡೆದಿಲ್ಲ. ಹೀಗಿದ್ದೂ ಹಣ ಪಡೆದು ನಿಗದಿತ ಅಧಿಯಲ್ಲಿ ಸೈಟು ಕೊಟ್ಟಿಲ್ಲ. ಇದೀಗ ಬಿಡಿಎ, ಬಿಎಂಆರ್ಡಿಎ, ಬೈಯಪಾ ಸಂಸ್ಥೆಗಳ ಅನುಮೋದನೆ ಅಗತ್ಯವಿದೆ ಎಂದು ಸಬೂಬು ಹೇಳುತ್ತಿದೆ. ‘

“ಯಾವುದೇ ಅನುಮೋದನೆಗಳನ್ನು ಸಹ ಪಡೆಯದೆ, ಕೇವಲ ಪತ್ರಿಕಾ ಪ್ರಕಟಣೆ ಮತ್ತು ಜಾಹೀರಾತುಗಳನ್ನು ಬಿಡುಗಡೆ ಮಾಡಿ ದೊಡ್ಡ ಮೊತ್ತದ ಹಣ ಪಡೆದಿದೆ” ಹೀಗಾಗಿ ದೂರುದಾರರು ಹಣ ಪಾವತಿಸಿದ ದಿನಾಂಕದಿಂದ ಈವರೆಗೆ ಶೇ 10 ರಷ್ಟು ಬಡ್ಡಿಯೊಂದಿಗೆ 12.3 ಲಕ್ಷ ರೂಗಳನ್ನು ಮರುಪಾವತಿಸಬೇಕು. ಅಲ್ಲದೇ ಗ್ರಾಹಕರಿಗಾದ ತೊಂದರೆಗೆ ಮತ್ತು ಕಾನೂನು ವೆಚ್ಚವಾಗಿ 2.10 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸಬೇಕು. ಈ ಆದೇಶದ 60 ದಿನಗಳೊಳಗೆ ಹಣವನ್ನು ಪಾವತಿಸಲು ಸೊಸೈಟಿ ವಿಫಲವಾದರೆ, ಒಟ್ಟು ಪಾವತಿಸಿರುವ ಹಣದ ಮೇಲೆ ಶೇಕಡಾ 12 ರಷ್ಟು ಬಡ್ಡಿಯನ್ನು ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2015 ರ ನವೆಂಬರ್ ನಲ್ಲಿ ಸೊಸೈಟಿಯು ನೀಡಿದ್ದ ಸೈಟ್ ಹಂಚಿಕೆಗೆ ಸಂಬಂಧಿಸಿದ ಜಾಹೀರಾತು ಗಮನಿಸಿ ಬೆಂಗಳೂರಿನ ವಿಜಯನಗರ ನಿವಾಸಿ ಜೇಕಬ್ ಈಸೋವ್ ಸೊಸೈಟಿಗೆ ಹಣ ಪಾವತಿಸಿದ್ದರು. ಹಣ ಪಡೆದಿದ್ದ ಸೊಸೈಟಿ ದೇವನಹಳ್ಳಿ ಬಳಿಯ ಐವಿಸಿ ರಸ್ತೆಯಲ್ಲಿ ಟೆಲಿಕಾಂ ಗ್ರೀನ್ ಸಿಟಿ ಯೋಜನೆಯಲ್ಲಿ ಅಡಿ 30X 50 ಅಡಿ ಸೈಟ್ ನೀಡುವ ಭರವಸೆ ನೀಡಿತ್ತು. ಜತೆಗೆ ಯೋಜನೆಯು 36 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಜೇಕಬ್ ಸೈಟ್‌ಗೆ 13.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಸೊಸೈಟಿ ತಿಳಿಸಿತ್ತು.

ಸೊಸೈಟಿಯ ಭರವಸೆ ಮೇರೆಗೆ ಜೇಕಬ್ ಹಣ ಪಾವತಿಸಿದ್ದರು. ನಿಗದಿತ ಅವಧಿಯಲ್ಲಿ ಸೈಟು ಸಿಗದಿದ್ದಾಗ ಹಣ ಹಿಂದಿರುಗಿಸುವಂತೆ ಕೋರಿದ್ದರು. ಆದರೆ ಸೊಸೈಟಿ ಹಣ ನೀಡಿರಲಿಲ್ಲ. ನಂತರ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ಅದಕ್ಕೂ ಸೊಸೈಟಿ ಸ್ಪಂದಿಸದಿದ್ದಾಗ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.