ಮಂಡ್ಯ:ದಿನಸಿ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಮೂವರನ್ನು ಮದ್ದೂರು ತಾಲ್ಲೂಕು ಕೆ.ಎಂ.ದೊಡ್ಡಿ ಠಾಣೆಯ ಪೋಲಿಸರು ಬಂಧಿಸಿದ್ದಾರೆ.
ಮೈಸೂರಿನ ಶಾಂತಿನಗರ ನಿವಾಸಿಗಳಾದ,ನವಾಜ್ ಖಾನ್, ಅಬೀದ್ ಅಹಮದ್ ಹಾಗೂ ಶಬ್ಬಿರ್ ಖಾನ್ ಬಂಧಿತರು.
ಕಳೆದ ಏ.1ರಂದು ಬೆಳಗಿನ ಜಾವ ವಿಶೇಷ ಗಸ್ತಿನಲ್ಲಿದ್ದ ಕೆ.ಎಂ.ದೊಡ್ಡಿಯಲ್ಲಿ ಪೊಲೀಸರು ಇನ್ನೊವಾ ಕಾರನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿದ್ದ ಮೂವರು ಸಂಶಯಾಸ್ಪದ ವಸ್ತುಗಳನ್ನು ಇಟ್ಟುಕೊಂಡಿದ್ದರು. ಅವರನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಮೂರು ಜನರು ಕಳೆದ ಮಾರ್ಚ್ 23 ರಂದು ರಾತ್ರಿ ಕೆ.ಎಂ.ದೊಡ್ಡಿ ಟೌನ್ ಮಂಡ್ಯ ರಸ್ತೆಯಲ್ಲಿರುವ ಚಂದ್ರಣ್ಣ ರವರ ಕಾಂಪ್ಲೆಕ್ಸ್‌ನಲ್ಲಿರುವ ದೀಕ್ಷಾ ಮಾರ್ಟ್ ದಿನಸಿ ಅಂಗಡಿಯಲ್ಲಿ ಕಳ್ಳತನ ಮಾಡಿರುವುದು ಮತ್ತು ಮಾ.17 ರಂದು ರಾತ್ರಿ ಕೆ.ಆರ್.ಪೇಟೆ ಟೌನ್ ನಲ್ಲಿ ರಾಮಲಿಂಗೇಶ್ವರ ದಿನಸಿ ಅಂಗಡಿಯಲ್ಲಿ ಕಳ್ಳತನ ಮಾಡಿರುವುದು ವಿಚಾರಣೆ ಸಂದರ್ಭದಲ್ಲಿ ಕಂಡು ಬಂದಿದೆ.
ಮೂವರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಇನ್ನೋವಾ ಕಾರು, ಕಳ್ಳತನ ಮಾಡಿದ್ದ ಕಂಪ್ಯೂಟರ್ ಉಪಕರಣಗಳು ಮತ್ತು ಸುಮಾರು 1,20,000 ರೂ. ಬೆಲೆ ಬಾಳುವ ದಿನಸಿ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ಸಿ.ಇ. ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ ರವರ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿ.ವೈ.ಎಸ್.ಪಿ. ಕೃಷ್ಣಪ್ಪ, ವಿ ಅವರ ನೇತೃತ್ವದಲ್ಲಿ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಎಸ್.ಆನಂದ್, ಪಿ.ಎಸ್.ಎ.ಗಳಾದ ಭೀಮಪ್ಪ ಎಸ್. ಬಾಣಸಿ, ಇಪರತ್ ಬೇಗಂ ಮತ್ತು ಸಿಬ್ಬಂದಿಗಳಾದ ವಿಠಲ್ ಜೆ. ಕರಿಗಾರ್, ಅರುಣ್, ಸುಬ್ರಮಣಿ, ನಟರಾಜ್ ತಂಡದಲ್ಲಿದ್ದರು.