ಮನೆ ಕಾನೂನು ಪತ್ನಿ ಪದೇ ಪದೇ ಪತಿಯ ಮನೆ ತ್ಯಜಿಸುವುದು ಮಾನಸಿಕ ಕ್ರೌರ್ಯ: ದೆಹಲಿ ಹೈಕೋರ್ಟ್‌

ಪತ್ನಿ ಪದೇ ಪದೇ ಪತಿಯ ಮನೆ ತ್ಯಜಿಸುವುದು ಮಾನಸಿಕ ಕ್ರೌರ್ಯ: ದೆಹಲಿ ಹೈಕೋರ್ಟ್‌

0

ನವದೆಹಲಿ: ಪತಿಯ ಯಾವುದೇ ತಪ್ಪಿಲ್ಲದಿದ್ದರೂ, ಪತ್ನಿಯು ಪದೇ ಪದೇ ತನ್ನ ಪತಿಯ ಮನೆ ಬಿಟ್ಟು ಹೋಗುವುದನ್ನು ಮಾನಸಿಕ ಕ್ರೌರ್ಯ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

Join Our Whatsapp Group

ಪರಸ್ಪರ ಬೆಂಬಲ, ಭಕ್ತಿ ಮತ್ತು ನಿಷ್ಠೆಯ ಫಲವತ್ತಾದ ಮಣ್ಣಿನಲ್ಲಿ ವಿವಾಹವು ಅರಳುತ್ತದೆ ಮತ್ತು ದೂರ, ಪರಿತ್ಯಕ್ತತೆಯು ಈ ಬಂಧವನ್ನು ಸರಿಪಡಿಸಲಾಗದಷ್ಟು ಮುರಿಯುತ್ತದೆ ಎಂದು ನ್ಯಾಯಮೂರ್ತಿಗಳಾದ ಸುರೇಶ್‌ ಕುಮಾರ್‌ ಕೈಟ್‌, ನೀನಾ ಬನ್ಸಾಲ್‌ ಕೃಷ್ಣ ಅವರಿದ್ದ ಪೀಠ ವಿವರಿಸಿದೆ.

ಪತ್ನಿಯ ಪರಿತ್ಯಕ್ತ ಮನಸ್ಥಿತಿಯನ್ನು ಗಮನಿಸಿದ ಪೀಠವು ಪತಿಗೆ ವಿಚ್ಛೇದನಕ್ಕೆ ಅನುಮತಿಸಿ ತೀರ್ಪು ನೀಡಿದೆ.

ವಿಚ್ಛೇದನ ನೀಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

19 ವರ್ಷಗಳ ದಾಂಪತ್ಯ ಜೀವನದಲ್ಲಿ ಪತ್ನಿಯು ಏಳು ಬಾರಿ ಪತಿಯಿಂದ ದೀರ್ಘಕಾಲ ದೂರ ಇದ್ದಾರೆ. ಅವರು ಪ್ರತಿ ಬಾರಿಯೂ 3ರಿಂದ 10 ತಿಂಗಳವರೆಗೆ ಪತಿಯನ್ನು ತೊರೆದಿದ್ದಾರೆ ಎಂಬುದನ್ನು ಪೀಠ ಗಮನಿಸಿದೆ.

ದೀರ್ಘಕಾಲ ಪ್ರತ್ಯೇಕವಾಗಿ ಇರುವುದು ವೈವಾಹಿಕ ಸಂಬಂಧವನ್ನು ಸರಿಪಡಿಸಲಾಗದ ಸ್ಥಿತಿಗೆ ತಳ್ಳುತ್ತದೆ. ಇದು ಮಾನಸಿಕ ಕ್ರೌರ್ಯವನ್ನೂ ರೂಪಿಸುತ್ತದೆ. ಸಹಬಾಳ್ವೆ ಮತ್ತು ವೈವಾಹಿಕ ಸಂಬಂಧಗಳನ್ನು ನಿಲ್ಲಿಸುವುದು ಅಥವಾ ವಂಚಿಸುವುದು ಸಹ ಕ್ರೌರ್ಯವೇ ಆಗಿದೆ ಎಂದು ಪೀಠ ಹೇಳಿದೆ.

ಪತಿಯ ಮನೆಗೆ ಮರಳಲು ಯಾವುದೇ ಗಂಭೀರ ರಾಜಿ ಪ್ರಯತ್ನಗಳನ್ನು ಮಾಡದ ಕಾರಣ ಪತ್ನಿಯು ವೈವಾಹಿಕ ಸಂಬಂಧದಲ್ಲಿ ಮುಂದುವರಿಯುವ ಉದ್ದೇಶ ಹೊಂದಿಲ್ಲ ಎಂಬುದನ್ನೂ ಗಮನಿಸಿರುವುದಾಗಿ ಪೀಠ ಹೇಳಿದೆ.

ಹೀಗಾಗಿ ಪತಿಯು ವಿಚ್ಛೇದನ ಪಡೆಯಲು ಅರ್ಹರಾಗಿದ್ದಾರೆ ಎಂದ ಪೀಠವು, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ, ವಿಚ್ಛೇದನಕ್ಕೆ ಅನುಮತಿಸಿ ತೀರ್ಪು ನೀಡಿದೆ.