ಮನೆ ಸುದ್ದಿ ಜಾಲ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ: ಎಸ್.ಟಿ.ಸೋಮಶೇಖರ್‌ ವಿಶ್ವಾಸ

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ: ಎಸ್.ಟಿ.ಸೋಮಶೇಖರ್‌ ವಿಶ್ವಾಸ

0

ಹೆಚ್.ಡಿ.ಕೋಟೆ (H.D.Kote)- ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ನಡೆಯುತ್ತಿರುವ ವಿಧಾನಪರಿಷತ್‌ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲೂ ಬಿಜೆಪಿ ಜಯಗಳಿಸಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್‌ (S.T.Somashekar) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಹೆಚ್.ಟಿ.ತಾಲೂಕಿನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದರು.

ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರು ಗೆಲ್ಲಲಿದ್ದಾರೆ. ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ನಡೆಯುತ್ತಿರುವ ನಾಲ್ಕು ಸ್ಥಾನಗಳಲ್ಲಿ ಕೂಡ ಬಿಜೆಪಿ ಜಯಗಳಿಸಲಿದೆ ಎಂದರು.

ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಒಗ್ಗಟ್ಟಾಗಿ ಮೈ.ವಿ.ರವಿಶಂಕರ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರೂ 6 ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ, ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದರು.

ಪದವೀಧರರ ಸಮಸ್ಯೆಗಳ ಬಗ್ಗೆ ವಿಧಾನಪರಿಷತ್ ನಲ್ಲಿ ಮಾತನಾಡುವ ಸಾಮರ್ಥ್ಯ ರವಿಶಂಕರ್ ಅವರಿಗಿದೆ. ಸಮಸ್ಯೆಯ ಮೂಲ ತಿಳಿದು ಅದನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಸಾಮರ್ಥ್ಯ ಇದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಪಕ್ಷದ ವತಿಯಿಂದ 60 ಸಾವಿರ ಮೇಲ್ಪಟ್ಟ ಪದವೀಧರರ ನೋಂದಣಿ ಮಾಡಲಾಗಿದೆ. ಪಕ್ಷ ಸ್ಪಷ್ಟ ಸೂಚನೆ ನೀಡಿದ ಹಿನ್ನೆಲೆ ಒಂದು ವರ್ಷದಿಂದಲೇ ನೋಂದಣಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಎಂದು ಸಚಿವರು ವಿವರಿಸಿದರು.

ಶಿಕ್ಷಕರು ಕೆಲವು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಇದೇ ತಿಂಗಳ 23-24ಕ್ಕೆ ಶಿಕ್ಷಣ ಸಚಿವರು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಶಿಕ್ಷಕರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಯತ್ನಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಹಲವು ಸಚಿವರು ಮೈಸೂರಿಗೆ ಆಗಮಿಸಲಿದ್ದಾರೆ ಎಂದರು.

ಹಾಸನದಲ್ಲಿ ಪ್ರೀತಂಗೌಡ, ಮಂಡ್ಯದಲ್ಲಿ ಗೋಪಾಲಯ್ಯ, ನಾರಾಯಣಗೌಡ, ಚಾಮರಾಜನಗರದಲ್ಲಿ ಸೋಮಣ್ಣ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಇರಲಿಲ್ಲ, ಈ ಬಾರಿ ಎರಡು ಕಡೆ ನಮ್ಮ ಪಕ್ಷವೇ ಇದೆ. ಹೀಗಾಗಿ ರವಿಶಂಕರ್ ನೂರಕ್ಕೆ ನೂರಷ್ಟು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಲನಹಳ್ಳಿ, ಹೆಚ್.ಡಿ.ಕೋಟೆ, ಸರಗೂರು, ಮಾದಾಪುರ, ಅಂತರಸಂತೆ ಸೇರಿದಂತೆ ಹಲವು ಕಡೆಗಳಲ್ಲಿ ಪದವೀಧರರು, ಶಿಕ್ಷಕರು, ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿದ ಸಚಿವರು, ಮೈ.ವಿ.ರವಿಶಂಕರ್ ಪರವಾಗಿ ಮತಯಾಚನೆ ಮಾಡಿದರು.

ಗೋ ಮಧುಸೂದನ್ ಪ್ರಚಾರ:

ಮೈ.ವಿ.ರವಿಶಂಕರ್ ಅವರ ಗೆಲುವಿಗಾಗಿ ಎಲ್ಲರೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಗೋ. ಮಧುಸೂದನ್ ಕೂಡ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ಹೇಳಿದರು.

ಹೆಚ್.ಡಿ.ಕೋಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಧುಸೂದನ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲಾಗಿದೆ. ಅವರು ಕೂಡ ರವಿಶಂಕರ್ ಪರ ಮತಯಾಚನೆ ಮಾಡಲಿದ್ದಾರೆ ಎಂದರು.