ಮನೆ ಕಾನೂನು ಮ್ಯಾಗಿ ನೂಡಲ್ಸ್ ಸುರಕ್ಷತೆ: ನೆಸ್ಲೆ ವಿರುದ್ಧ 2015ರಲ್ಲಿ ಕೇಂದ್ರ ದಾಖಲಿಸಿದ್ದ ದೂರು ವಜಾಗೊಳಿಸಿದ ಎನ್‌ ಸಿಡಿಆರ್‌...

ಮ್ಯಾಗಿ ನೂಡಲ್ಸ್ ಸುರಕ್ಷತೆ: ನೆಸ್ಲೆ ವಿರುದ್ಧ 2015ರಲ್ಲಿ ಕೇಂದ್ರ ದಾಖಲಿಸಿದ್ದ ದೂರು ವಜಾಗೊಳಿಸಿದ ಎನ್‌ ಸಿಡಿಆರ್‌ ಸಿ

0

ಮ್ಯಾಗಿ ನೂಡಲ್ಸ್ ಸುರಕ್ಷತೆ ಕುರಿತಂತೆ ಅದರ ತಯಾರಕ ಕಂಪೆನಿ ನೆಸ್ಲೆ ಇಂಡಿಯಾ ವಿರುದ್ಧ 2015ರಲ್ಲಿ ಕೇಂದ್ರ ಸರ್ಕಾರ ದಾಖಲಿಸಿದ್ದ ದೂರನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಈಚೆಗೆ ವಜಾಗೊಳಿಸಿದೆ  .

Join Our Whatsapp Group

“ಎಂಎಸ್‌ಜಿ ಸೇರ್ಪಡೆ ಮಾಡಿಲ್ಲ” ಎಂಬ ಲೇಬಲ್‌ ಸೇರಿಸುವ ಮೂಲಕ ನೆಸ್ಲೆ ಅನ್ಯಾಯದ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಆರೋಪಿಸಿದ್ದ ಕೇಂದ್ರ ಸರ್ಕಾರ ಈ ನೂಡಲ್‌ ಉತ್ಪನ್ನದಲ್ಲಿ ಅನುಮತಿಸಲು ಸಾಧ್ಯವಿಲ್ಲದಷ್ಟು ಸೀಸದ ಪ್ರಮಾಣವಿದೆ ಎಂದಿತ್ತು.

ಆದರೆ ಪರೀಕ್ಷೆಗೊಳಪಟ್ಟ ಮ್ಯಾಗಿ ನೂಡಲ್ ಉತ್ಪನ್ನಗಳಲ್ಲಿ ಸೀಸದ ಅಂಶ  ಅನುಮತಿಸಬಹುದಾದ ಮಿತಿಯಲ್ಲಿದೆ ಎಂದು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ವರದಿ ಸ್ಪಷ್ಟವಾಗಿ ದಾಖಲಿಸಿದೆ ಎಂಬುದನ್ನು  ಏಪ್ರಿಲ್ 12ರ ಆದೇಶದಲ್ಲಿ, ಎನ್‌ಸಿಡಿಆರ್‌ಸಿ ಅಧ್ಯಕ್ಷ, ನ್ಯಾಯಮೂರ್ತಿ ಎ ಪಿ ಸಾಹಿ ಅವರು ಉಲ್ಲೇಖಿಸಿದ್ದಾರೆ. 

ಒಮ್ಮೆ ಸರ್ಕಾರವೇ ಖುದ್ದು ನೀಡಿದ ವೈಜ್ಞಾನಿಕ ವಿಶ್ಲೇಷಣೆ ಮತ್ತು ಸ್ಪಷ್ಟೀಕರಣಗಳು ಪ್ರತಿವಾದಿಯ (ನೆಸ್ಲೆ) ವಿರುದ್ಧ ಆಪಾದನೆ ಮಾಡಿಲ್ಲ. ದೂರಿನಲ್ಲಿ ಮಾಡಲಾದ ಆರೋಪಗಳನ್ನು ಇನ್ನಷ್ಟು ಬೆಂಬಲಿಸಲು ಯಾವುದೇ ಆಧಾರ ಇಲ್ಲ ಎಂದು ತೀರ್ಪು ನೀಡಿರುವ ಆಯೋಗ ನೆಸ್ಲೆ ವಿರುದ್ಧದ ದೂರನ್ನು ವಜಾಗೊಳಿಸಿತು.

ಮ್ಯಾಗಿ ನೂಡಲ್ಸ್‌ನ ವಿವಿಧ ರೂಪಾಂತರಗಳಲ್ಲಿ ಗಮನಾರ್ಹ ಸೀಸದ ಅಂಶ ಕಂಡುಬಂದಿದ್ದರಿಂದ “ಎಂಎಸ್‌ಜಿ ಸೇರ್ಪಡೆ ಮಾಡಿಲ್ಲ” ಎಂಬ ಲೇಬಲ್‌ಗಳನ್ನು ಸರಿಪಡಿಸುವುದಕ್ಕಾಗಿ ನೂಡಲ್ಸ್‌ನ ಒಂಬತ್ತು ಉತ್ಪನ್ನಗಳನ್ನು ಹಿಂಪಡೆಯುವಂತೆ 2015ರಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನೆಸ್ಲೆಗೆ ನಿರ್ದೇಶನ ನೀಡಿತ್ತು.

ಆದೇಶದಂತೆ ನೆಸ್ಲೆ ತಕ್ಷಣವೇ ತನ್ನ ಉತ್ಪನ್ನಗಳನ್ನು ಹಿಂತೆಗೆದುಕೊಂಡಿತಾದರೂ ಬಾಂಬೆ ಹೈಕೋರ್ಟ್‌ನಲ್ಲಿ ಎಫ್‌ಎಸ್‌ಎಸ್‌ಎಐ  ಕ್ರಮವನ್ನು ಪ್ರಶ್ನಿಸಿತು. ನೆಸ್ಲೆ ಸ್ವಯಂಪ್ರೇರಿತವಾಗಿ  ತನ್ನ ಉತ್ಪನ್ನಗಳನ್ನು ಹಿಂತೆಗೆದುಕೊಂಡಿರುವುದನ್ನು ಗಮನಿಸಿದ ಹೈಕೋರ್ಟ್, ಸರ್ಕಾರದ ಆದೇಶಕ್ಕೆ ತಡೆ ನೀಡಿತು. ಅಂತಿಮವಾಗಿ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ನೆಸ್ಲೆ ವ್ಯವಹಾರ ಪುನರಾರಂಭ ಮಾಡಲು ಅನುಮತಿಸಿತು. 

ನಂತರ ಕೇಂದ್ರ ಸರ್ಕಾರ ಎನ್‌ಸಿಡಿಆರ್‌ಸಿಗೆ ದೂರು ಸಲ್ಲಿಸಿತ್ತು. ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ತಲುಪಿ , ಅದು  ನೂಡಲ್ಸನ್ನು ಸಿಎಫ್‌ಟಿಆರ್‌ಐ ಪರೀಕ್ಷಿಸಬೇಕು ಎಂದು ನಿರ್ದೇಶಿಸಿತು ಮತ್ತು ವರದಿಯನ್ನು ಪರಾಮರ್ಶಿಸುವುದು ಆಯೋಗಕ್ಕೆ ಬಿಟ್ಟದ್ದು ಎಂದಿತು. 

ಮ್ಯಾಗಿ ನೂಡಲ್ಸ್‌ನಲ್ಲಿ ಸೀಸದ ಅಂಶ ಅನುಮತಿಸುವ ಮಟ್ಟದಲ್ಲಿದೆ ಎಂದು ಸಿಎಫ್‌ಟಿಆರ್‌ಐ ವರದಿ ನೀಡಿದ ಹಿನ್ನೆಲೆಯಲ್ಲಿ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಅಥವಾ ಗ್ರಾಹಕ ಸಂರಕ್ಷಣಾ ಕಾಯಿದೆಯನ್ನು ನೆಸ್ಲೆ ಉಲ್ಲಂಘಿಸಿದೆ ಎಂದು ಕೇಂದ್ರ ಸರ್ಕಾರ ಆರೋಪಿಸದ ಹಿನ್ನೆಲೆಯಲ್ಲಿ ಕೇಂದ್ರದ ದೂರನ್ನು ಆಯೋಗ ವಜಾಗೊಳಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ವಿಕ್ರಮಜಿತ್ ಬ್ಯಾನರ್ಜಿ,  ಕೇಂದ್ರ ಸರ್ಕಾರದ ಸ್ಥಾಯಿ ವಕೀಲ (CGSC) ಮುಕುಲ್ ಸಿಂಗ್ ವಕೀಲರಾದ ಸಿದ್ಧಾರ್ಥ ಸಿನ್ಹಾ, ಇರಾ ಸಿಂಗ್ ಮತ್ತು ಪ್ರಶಾಂತ್ ರಾವತ್ ವಾದ ಮಂಡಿಸಿದರು.

ನೆಸ್ಲೆಯನ್ನು ಹಿರಿಯ ವಕೀಲರಾದ ಹರೀಶ್ ಸಾಳ್ವೆ, ಅಮಿತ್ ಸಿಬಲ್ ವಕೀಲರಾದ ರವೀಂದರ್ ನರೇನ್, ರಾಜೇಶ್ ಬಾತ್ರಾ, ಸಿದ್ಧಾರ್ಥ್ ಬಂಥಿಯಾ, ಸ್ಮರಿಕಾ ಸಿಂಗ್, ಸೈಫುರ್ ರೆಹಮಾನ್, ಸರೀಮ್ ಖಾನ್, ಸೋನಿಯಾ ಕುಕ್ರೇಜಾ, ರೋಹಿತ್ ಚಂದ್ರ, ದರ್ಪಣ್ ಸಚ್‌ದೇವ, ರಿಷಬ್ ಶರ್ಮಾ  ಹಾಗೂ ಅರ್ಜುನ್ ರಾಣಾ ಪ್ರತಿನಿಧಿಸಿದ್ದರು.