ಪೊಲೀಸ್ ದೂರು ದಾಖಲಾಗಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ವಯಸ್ಕ ಗರ್ಭಿಣಿಗೆ ಆಸ್ಪತ್ರೆಯು ವೈದ್ಯಕೀಯ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಸಹಮತದಿಂದ ದೈಹಿಕ ಸಂಬಂಧ ಬೆಳೆಸಿದ್ದರಿಂದ ತನ್ನ ಅಪ್ರಾಪ್ತ ವಯಸ್ಕ ಸಂಗಾತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ತಾನು ಬಯಸುವುದಿಲ್ಲ ಎಂದು 17 ವರ್ಷದ ಗರ್ಭಿಣಿ ಬಾಲಕಿ ತಿಳಿಸಿದ ಪ್ರಕರಣದಲ್ಲಿ ನ್ಯಾಯಾಲಯ ಈ ಅಂಶ ಸ್ಪಷ್ಟಪಡಿಸಿದೆ.
ಅಂತಹ ಸಂದರ್ಭಗಳಲ್ಲಿ ಚಿಕಿತ್ಸೆ ನೀಡಬೇಕು ಎಂದಾದರೆ ಕ್ರಿಮಿನಲ್ ಮೊಕದ್ದಮೆಯನ್ನು ಮೊದಲೇ ದಾಖಲಿಸಿರಬೇಕು ಎಂದು ಆಸ್ಪತ್ರೆ ಒತ್ತಾಯಿಸುವಂತಿಲ್ಲ ಎಂಬುದಾಗಿ ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಮತ್ತು ಫಿರ್ದೋಶ್ ಪೂನಿವಾಲಾ ಅವರಿದ್ದ ವಿಭಾಗೀಯ ಪೀಠ ಏಪ್ರಿಲ್ 10ರಂದು ನೀಡಿದ ಆದೇಶದಲ್ಲಿ ಹೇಳಿದೆ.
ಸಂಗಾತಿಗಳಲ್ಲಿ ಒಬ್ಬರು ವಯಸ್ಕರಾಗಿದ್ದು ಇನ್ನೊಬ್ಬರು ಅಪ್ರಾಪ್ತರಾಗಿದ್ದರೆ ಆಗ ಅಪ್ರಾಪ್ತರೊಂದಿಗಿನ ಲೈಂಗಿಕ ಸಂಬಂಧ ಶಾಸನ ಸಂಬಂಧಿತ ಅತ್ಯಾಚಾರ ಎಂದು ದಂಡ ವಿಧಿಸಬಹುದಾಗಿದೆ. ಅಪ್ರಾಪ್ತ ವಯಸ್ಕರೊಂದಿಗೆ ಲೈಂಗಿಕ ಸಂಬಂಧ ಹೊಂದುವ ವ್ಯಕ್ತಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ- 2012ರ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಶಿಕ್ಷೆಗೆ ಒಳಗಾಗುತ್ತಾನೆ.
ಆದರೆ ಈ ಪ್ರಕರಣದಲ್ಲಿ ಇಬ್ಬರೂ ಸಂಗಾತಿಗಳು ಅಪ್ರಾಪ್ತ ವಯಸ್ಕರು. ಅಲ್ಲದೆ ತಮ್ಮದು ಸಹಮತದ ಸಂಬಂಧ ಎಂದು ಅಪ್ರಾಪ್ತ ಬಾಲಕಿ ಹೇಳಿದ್ದರಿಂದ ತನ್ನ ಸಂಗಾತಿಯ ವಿವರವನ್ನು ಬಹಿರಂಗಪಡಿಸಲು ಆಕೆ ಒಪ್ಪದೇ ಇದ್ದುದರಿಂದ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಆದರೆ, ಅಂತಹ ಪ್ರಕರಣದಲ್ಲಿಯೂ ಕೂಡ ಹುಡುಗಿ ವೈದ್ಯಕೀಯ ಚಿಕಿತ್ಸೆ ಕೋರಿದ ಪ್ರತಿಯೊಂದು ಆಸ್ಪತ್ರೆ ಇಲ್ಲವೇ ವೈದ್ಯಕೀಯ ಚಿಕಿತ್ಸಾಲಯದಲ್ಲಿ ಮೊದಲು ಪೊಲೀಸ್ ದೂರಿನ ಪ್ರತಿ ತೋರಿಸಬೇಕೆಂದು ಒತ್ತಾಯಿಸಲಾಗಿತ್ತು.
ಹೀಗಾಗಿ ಪರಿಹಾರ ಕೋರಿ ಆಕೆ ತನ್ನ ತಂದೆಯ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದಳು. ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಹಕ್ಕುಗಳ ದೃಷ್ಟಿಯಿಂದ ಆಕೆಗೆ ವೈದ್ಯಕೀಯ ಸಹಾಯ ನಿರಾಕರಿಸುವಂತಿಲ್ಲ ಎಂದು ಆಕೆಯ ಪರ ವಕೀಲರು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲೆ ಪೂರ್ಣಿಮಾ ಕಾಂಟಾರಿಯಾ, ಬಾಲಕಿಯ ಗುರುತನ್ನು ಬಹಿರಂಗಪಡಿಸದೆ ಸರ್ಕಾರಿ ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಅಪ್ರಾಪ್ತ ಬಾಲಕಿ ಪೊಲೀಸ್ ದೂರು ನೀಡಲು ಬಯಸುವುದಿಲ್ಲ ಎಂದು ಔಪಚಾರಿಕ ಹೇಳಿಕೆ ನೀಡುವಂತೆ ಸರ್ಕಾರಿ ವಕೀಲೆ ಸೂಚಿಸಿದರು. ಈ ಹೇಳಿಕೆಯನ್ನು ತುರ್ತು ಪೊಲೀಸ್ ವರದಿ (ಇಪಿಆರ್) ರೂಪದಲ್ಲಿ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
ಈ ಸಲಹೆಯಲ್ಲಿ ಯಾವುದೇ ಹಾನಿ ಇಲ್ಲ ಎಂದು ಪರಿಗಣಿಸಿದ ನ್ಯಾಯಾಲಯ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಿಕೊಳ್ಳಲಿರುವ ಕಾಂಟಾರಿಯಾ ಅವರಿಗೆ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.
“ಅಗತ್ಯವಿದ್ದಲ್ಲಿ ಮತ್ತು ನ್ಯಾಯಾಲಯದ ಪೂರ್ವಾನುಮತಿಯೊಂದಿಗೆ ಅದನ್ನು ಸೂಕ್ತ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು” ಎಂದು ಪೀಠ ನುಡಿಯಿತು. ,
ಅಲ್ಲದೆ ಗೌಪ್ಯತೆ ಕಾಪಾಡಿಕೊಳ್ಳಲು ಎಲ್ಲಾ ಮುನ್ನೆಚ್ಚರಿಕೆ ಮತ್ತು ಕಾಳಜಿವಹಿಸುವಂತೆ ಜೆಜೆ ಆಸ್ಪತ್ರೆಯ ಡೀನ್ ಅವರಿಗೆ ಸೂಚಿಸಲಾಯಿತು. ಹುಡುಗಿಯ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡವಂತೆಯೂ ನ್ಯಾಯಾಲಯ ತಿಳಿಸಿತು.