ಮನೆ ರಾಜ್ಯ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮುಂದುವರಿಕೆ: ಬಿ.ಎಸ್. ಯಡಿಯೂರಪ್ಪ

ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮುಂದುವರಿಕೆ: ಬಿ.ಎಸ್. ಯಡಿಯೂರಪ್ಪ

0

ದಾವಣಗೆರೆ : ಲೋಕಸಭಾ ಚುನಾವಣೆ ಮಾತ್ರವಲ್ಲದೇ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮುಂದುವರಿಯಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.

Join Our Whatsapp Group

ರಾಜ್ಯದಲ್ಲಿ ಬಿಜೆಪಿ– ಜೆಡಿಎಸ್ ಪಕ್ಷಗಳು ಒಂದಾಗಿ ಹೋಗಬೇಕು. ಈ ಹೊಂದಾಣಿಕೆ ಈ ಚುನಾವಣೆಗೆ ಸೀಮಿತವಲ್ಲ. ಮೈತ್ರಿ ಮುಂದುವರೆಯಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಮೈತ್ರಿ ಮುಂದುವರೆಯಬೇಕು ಎಂಬುದು ಜನರ ಆಶಯವಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ಪ್ರಯತ್ನ ಶುರುವಾಗಿದೆ. ನಾನು 23 ಕ್ಷೇತ್ರಗಳಲ್ಲೂ ಸುತ್ತಿದ್ದೇನೆ. ಉಳಿದ ಕ್ಷೇತ್ರಗಳಿಗೂ ಹೋಗುವೆ. ದೇವೇಗೌಡರು ಇಳಿವಯಸ್ಸಿನಲ್ಲೂ ಪ್ರಚಾರ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಸ್ನೇಹಿತರು ಬಹಳಷ್ಟು ಮಾತನಾಡುತ್ತಾರೆ. ಅದಕ್ಕೆ ಚುನಾವಣೆಯಲ್ಲಿ ಮತದಾರರು ಉತ್ತರ ಕೊಡುತ್ತಾರೆ. ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಲಿ ಎಂದು ಸವಾಲು ಹಾಕಿದ ಯಡಿಯೂರಪ್ಪ, ಯಾವುದೇ ವ್ಯಕ್ತಿಯ ಹೆಸರು ಹೇಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನಿಯಾಗಲಿದ್ದು, ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ 5 ವರ್ಷಗಳ ಕಾರ್ಯಕ್ರಮವನ್ನು ಈಗಾಗಲೇ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರೋಧಿಯಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಅಂಬೇಡ್ಕರ್ ನಿಧನರಾದಾಗ ಅವರ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಜವಾಹರಲಾಲ್ ನೆಹರೂ ಸಮಾಧಿಗೆ 52.6 ಎಕರೆ, ಇಂದಿರಾಗಾಂಧಿ ಸಮಾಧಿಗೆ 45 ಎಕರೆ, ರಾಜೀವ್ ಗಾಂಧಿ ಸಮಾಧಿಗೆ 15 ಎಕರೆ ಜಾಗ ನೀಡಲಾಗಿದೆ. ಆದರೆ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ಸರಿಯಲ್ಲ ಎಂದರು.

ಅಂಬೇಡ್ಕರ್ ಅವರಿಗೆ ನರೇಂದ್ರ ಮೋದಿ ಸರ್ಕಾರ ಹೇಗೆ ಗೌರವ ಸೂಚಿಸಿದೆ ಎಂಬುದನ್ನು ನೋಡಿದರೆ ಅವರ ಹುಟ್ಟಿದ ಊರನ್ನು 2 ಲಕ್ಷ ಜನ ದರ್ಶನ ಪಡೆಯಲು ಅಭಿವೃದ್ಧಿ ಪಡಿಸಲಾಗಿದೆ. ಲಂಡನ್‌ ನಲ್ಲಿ ಶಿಕ್ಷಣ ಪಡೆದ ಜಾಗವನ್ನು ಖರೀದಿಸಿ ದೊಡ್ಡ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಮುಂಬೈನಲ್ಲಿರುವ ಸಮಾಧಿ ಜಾಗದ ಅಭಿವೃದ್ಧಿ, ದೆಹಲಿಯಲ್ಲಿ ಅವರು ಇದ್ದ ಮನೆಯನ್ನು ವಸ್ತು ಸಂಗ್ರಹಾಲಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್‌ ಅಂಬೇಡ್ಕರ್ ಅವರನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಎರಡು ಬಾರಿ ಚುನಾವಣೆಗೆ ನಿಂತಾಗ ಸೋಲಿಸಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ₹11,164 ಕೋಟಿ ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾಹಿಸಿದ್ದು, ಅನ್ಯಾಯ ಮಾಡಿಕೊಂಡು ಬರಲಾಗಿದೆ’ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಪ‍್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೇಂದ್ರ ಸರ್ಕಾರದಿಂದ. ತೆರಿಗೆ ಹಣ ಬಂದಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಕೇಂದ್ರದಿಂದ ಬಂದಿರುವ ಹಣದ ಬಗ್ಗೆ ಇಷ್ಟರಲ್ಲಿಯೇ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.