ಕಲಬುರಗಿ: ನೇಹಾ ಕೊಲೆ ಪ್ರಕರಣದ ತನಿಖೆ ಸಿಬಿಐನಿಂದ ಮಾಡಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ನೇಹಾ ಕೊಲೆ ಪ್ರಕರಣವನ್ನು ಸಿದ್ದರಾಮಯ್ಯ ಸರ್ಕಾರ ಬಹಳ ಹಗುರವಾಗಿ ಪರಿಗಣಿಸಿದೆ, ಕೆಲ ಸಚಿವರು ನೇಹಾಳ ಮನೆಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು ಬಿಟ್ಟರೆ, ಈ ಹೇಯ ಕೃತ್ಯವನ್ನು ಖಂಡಿಸಿಲ್ಲ ಮತ್ತು ಕೊಲೆಗಡುಕನನ್ನು ಗಲ್ಲಿಗೇರಿಸುವ ಶಿಕ್ಷೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಅಂತ ಹೇಳಿಲ್ಲ ಎಂದು ಹೇಳಿದರು.
ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯೊಂದರಲ್ಲಿ ಬಿಜೆಪಿಯು ಮುಸ್ಲಿಂ ಸಮುದಾಯಕ್ಕೆ ಕಿರುಕುಳ ನೀಡುತ್ತಿದೆ, ಎಂದು ಹೇಳಿರುವುದನ್ನು ಯತ್ನಾಳ್ ಗಮನಕ್ಕೆ ತಂದಾಗ, ಮುಸಲ್ಮಾನರು ತಮ್ಮ ಸಹೋದರರು ಅಂತ ಅವರು ಘೋಷಣೆಯನ್ನೇ ಮಾಡಿದ್ದಾರೆ. ರಾಮನಗರದಲ್ಲಿ ಮುಸ್ಲಿಂ ಮತಾಂಧನೊಬ್ಬ ರಾಮಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದರೂ ಶಿವಕುಮಾರ್ ಅವನ ವಿರುದ್ಧ ಬಾಯಿಬಿಡಲಿಲ್ಲ, ತಾವು ಹಿಂದೂ ವಿರೋಧಿಗಳು ಅಂತ ಅವರು ಯಾವತ್ತೋ ಸಾಬೀತು ಮಾಡಿದ್ದಾರೆ ಎಂದು ಯತ್ನಾಳ್ ಹೇಳಿದರು.