ಮನೆ ಸ್ಥಳೀಯ ದೇಶ ಕಟ್ಟುವಲ್ಲಿ ಕೈಜೋಡಿಸಿ, ಚುನಾವಣೆಯನ್ನು  ಯಶಸ್ವಿಗೊಳಿಸಿ: ಡಾ ಕೆ.ವಿ.ರಾಜೇಂದ್ರ

ದೇಶ ಕಟ್ಟುವಲ್ಲಿ ಕೈಜೋಡಿಸಿ, ಚುನಾವಣೆಯನ್ನು  ಯಶಸ್ವಿಗೊಳಿಸಿ: ಡಾ ಕೆ.ವಿ.ರಾಜೇಂದ್ರ

0

ಮೈಸೂರು: ಚುನಾವಣೆಯಲ್ಲಿ ಸ್ವಯಂ ಸೇವಕರಾಗಿ  ದೇಶಕ್ಕೆ ಸೇವೆ ಸಲ್ಲಿಸುವ ಸುವರ್ಣ ಅವಕಾಶ ಸ್ವಯಂ ಸೇವಕರಿಗೆ ದೊರಕಿದೆ. ದೇಶವನ್ನು ಕಟ್ಟುವಲ್ಲಿ ಕೈಜೋಡಿಸಿ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು  ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ  ಅವರು  ತಿಳಿಸಿದರು.

Join Our Whatsapp Group

ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ  ಶಾರದಾ ವಿಲಾಸ ಕಾಲೇಜು  ಸಭಾಂಗಣದಲ್ಲಿ ನಡೆದ ಮತಗಟ್ಟೆಗೆ ನೇಮಕಗೊಂಡಿರುವ ಸ್ವಯಂ ಸೇವಕರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಭಾರತ ಸಂವಿಧಾನ ನೀಡಿದೆ  ಹಾಗಾಗಿ ಪ್ರತಿಯೊಬ್ಬರೂ ಸಹ ಕಡ್ಡಾಯವಾಗಿ ಮತದಾನ ಮಾಡುವಂತೆ ಸ್ವಯಂ ಸೇವಕರು ನಾಗರೀಕರಿಗೆ  ತಿಳಿಸಿಕೊಡಬೇಕು ಎಂದರು.

ಸ್ವಯಂ ಸೇವಕರು ಮತದಾರರಿಗೆ ಮತಗಟ್ಟೆ ಕೇಂದ್ರದಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮತದಾರರಿಗೆ ತಿಳಿಸಬೇಕು, ಪ್ರತ್ಯೇಕ ಸಾಲುಗಳಲ್ಲಿ ಸರದಿ ಸಾಲಿನಲ್ಲಿ  ಬರುವಂತೆ  ನಿಲ್ಲಿಸಿ  ಶಾಂತಿಯುತ ಮತದಾನ ಮಾಡಲು ಪ್ರೇರೇಪಣೆ ಮಾಡಬೇಕು.  ಅಶಕ್ತರು ಅಂಗವಿಕಲರು ,ವೃದ್ಧರು ಹಿರಿಯ ನಾಗರೀಕರಿಗೆ ಮತ್ತು ಮಹಿಳೆಯರಿಗೆ ಮತದಾನ ಮಾಡಲು ಸಹಾಯ ಮಾಡಬೇಕು. ವೀಲ್ ಚೇರ್ ,ಕುಡಿಯುವ ನೀರು ,ಶೌಚಾಲಯದ ಇತ್ಯಾದಿಗಳ ವ್ಯವಸ್ಥೆಗಳ ಬಗ್ಗೆ ಮತದಾರರಲ್ಲಿ ತಿಳಿಸಬೇಕು ಎಂದು ಹೇಳಿದರು.

ಸ್ವಯಂ ಸೇವಕರು ಭವ್ಯ ಭಾರತದ ಪ್ರಜೆಗಳು ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೇ ಕೆಲಸ ನಿರ್ವಹಿಸುವ ಜವಾಬ್ದಾರಿ ಸ್ವಯಂ ಸೇವಕರದು. ಸೈನಿಕರು ದೇಶವನ್ನು  ಕಾಯುವಂತೆ ,ಸ್ವಯಂ ಸೇವಕರಿಗೆ  ದೇಶವನ್ನು ಕಟ್ಟುವಂತಹ ಅವಕಾಶ ನಿಮಗೆ ಸಿಕ್ಕಿದೆ, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಚುನಾವಣೆಯನ್ನು  ಪ್ರಜಾಪ್ರಭುತ್ವದ ಹಬ್ಬದಂತೆ ಮಾಡಿ , ಮತದಾನವನ್ನು ಯಶಸ್ವಿಗೊಳಿಸುವಲ್ಲಿ ಸ್ವಯಂ ಸೇವಕರ ಪಾತ್ರ ಹೆಚ್ಚಾಗಿದ್ದು ಶಾಂತಿಯುತ ಮತದಾನ ಮಾಡುವಂತೆ  ಮತದಾರರಿಗೆ ಪ್ರೇರೇಪಣೆ ಮಾಡಬೇಕು. ಜಿಲ್ಲಾಡಳಿತದ ಜೊತೆ ಕೈಜೋಡಿಸಿ ಈ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಸ್ವಯಂ ಸೇವಕರಾಗಿ ಆಯ್ಕೆ  ಆದವರು ಮತದಾನದ ದಿನ ಬೆಳಿಗ್ಗೆ 6 ಗಂಟೆಗೆ ಮತಗಟ್ಟೆಯ ಬಳಿ ಬಂದು ತನ್ನ ಮತಗಟ್ಟೆಯ ಸುತ್ತಾ ಮುತ್ತಾ ಮುಂಚಿತವಾಗಿ ನೋಡಿಕೊಳ್ಳಬೇಕು. ಮತಗಟ್ಟೆಯ ಬಳಿ ಸಿಬ್ಬಂದಿಗಳು , ಬೂತ್ ಲೆವೆಲ್ ಅಧಿಕಾರಿಗಳು ಹಾಗೂ ಪೋಲಿಸ್ ಸಿಬ್ಬಂದಿಗಳೊಂದಿಗೆ‌ ಸಮನ್ವಯತೆ ಸಾಧಿಸಿ  ಮತ ಹಾಕಲು ಬಂದವರಿಗೆ ಮತಗಟ್ಟೆಗಳ ಬಗ್ಗೆ ಮಾಹಿತಿಯನ್ನು ನೀಡಬೇಕು.

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ.ಗಾಯಿತ್ರಿ ಅವರು  ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾದ ಚುನಾವಣೆಯನ್ನು ಪ್ರಜಾಪ್ರಭುತ್ವ ಹಬ್ಬದಂತೆ ಸ್ವೀಕರಿಸಿ ಅದನ್ನು ಯಶಸ್ವಿಗೊಳಿಸುವಲ್ಲಿ ಸ್ವಯಂ ಸೇವಕರ ಪಾತ್ರ ಬಹಳ ಮುಖ್ಯ. ಪ್ರತಿಯೊಬ್ಬ ಸ್ವಯಂ ಸೇವಕರು ಕೂಡಾ ಈ ನಿಟ್ಟಿನಲ್ಲಿ ಮತದಾನದ ಮಹತ್ವ, ಮತಗಟ್ಟೆಗಳ ಬಗ್ಗೆ ಮಾಹಿತಿ, ಮೂಲಭೂತ ಸೌಕರ್ಯಗಳು, ಹಾಗೂ ಅಗತ್ಯ ಸೇವೆಗಳ ಬಗ್ಗೆ ಮತದಾರರಿಗೆ ತಿಳಿಸಬೇಕು ಎಂದರು.

18 ವರ್ಷ ತುಂಬಿದ ಎಲ್ಲರೂ ಸಹ ಮತದಾನ ಮಾಡಿ,  ಹೊಸ ಮತದಾರರಾದಲ್ಲಿ ವೋಟಿಂಗ್ ಹೇಲ್ಸ್ ಲೈನ್ ಆಪ್  ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿಯ ಸಹಾಯಕ ನೋಡಲ್ ಅಧಿಕಾರಿಯಾದ ಎಂ.ಶಾಂತ ಅವರು ಮಾತನಾಡಿ  ಶಾಲೆಗಳಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ  ಮಕ್ಕಳಿಗೆ ತಿಳಿಸಿಕೊಡಬೇಕು. ಪ್ರತೀ ಶಾಲೆಗಳಲ್ಲಿ  9 ನೆ ತರಗತಿಯಿಂದಲೇ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು.

ಮತದಾರರು ಅವರ ಮತವನ್ನು ಅವರೇ ಚಲಾಯಿಸಬೇಕು. ಮತದಾರರು ಮತಗಟ್ಟೆಗೆ  ಯಾವುದೇ ಭಾವಚಿತ್ರವಿರುವ  ಗುರುತಿನ ಚೀಟಿಯನ್ನು ಕಡ್ಡಾಯವಾಗಿ  ತರಲು  ಸ್ವಯಂ ಸೇವಕರು ನಾಗರೀಕರಿಗೆ ತಿಳಿ ಹೇಳಬೇಕು ಎಂದರು. 

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಪಾಂಡು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರುದ್ರೇಶ್,  ವಲಯ ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು, ಪೋಷಕರು , ಸೇರಿದಂತೆ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.