ಮನೆ ಸುದ್ದಿ ಜಾಲ ಹಿಂದುಳಿದ ವರ್ಗಗಳ ಸ್ಥಳೀಯ ರಾಜಕೀಯ ಮೀಸಲಾತಿ ರಕ್ಷಣೆಗೆ ಆಗ್ರಹಿಸಿ ಮೇ 18ರಂದು ಪ್ರತಿಭಟನೆ

ಹಿಂದುಳಿದ ವರ್ಗಗಳ ಸ್ಥಳೀಯ ರಾಜಕೀಯ ಮೀಸಲಾತಿ ರಕ್ಷಣೆಗೆ ಆಗ್ರಹಿಸಿ ಮೇ 18ರಂದು ಪ್ರತಿಭಟನೆ

0

ಮೈಸೂರು (Mysuru)- ಹಿಂದುಳಿದ ವರ್ಗಗಳ ಸ್ಥಳೀಯ ರಾಜಕೀಯ ಮೀಸಲಾತಿ ರಕ್ಷಣೆಗೆ ಆಗ್ರಹಿಸಿ ಮೇ 18ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಸ್ಥಳೀಯ ಮೀಸಲಾತಿ ಸಂರಕ್ಷಣಾ ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಕೆ. ಎಸ್ ಶಿವರಾಮ್ (K.S.Shivaram) ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಹೊರತುಪಡಿಸಿ ಚುನಾವಣೆ ಮಾಡಿ ಎಂದು ಆದೇಶಿಸಿರುವುದರಿಂದ ಮೀಸಲಾತಿಗೆ ಸಂಚಕಾರ ಬಂದಿದ್ದು, ಈ ತೀರ್ಪು ಹಿಂದುಳಿದವರ್ಗಗಳಿಗೆ ಮರಣ ಶಾಸನವಾಗಿದೆ. ಆದ್ದರಿಂದ ಎಚ್ಚೆತ್ತು ಹೋರಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಹಿಂದುಳಿದವರ್ಗಗಳ ಮೀಸಲಾತಿ ರಕ್ಷಣೆಯ ಕುರಿತಾಗಿ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನ ಹೊರತುಪಡಿಸಿ ಯಾರು ಗಟ್ಟಿ ಧನಿಯಲ್ಲಿ ಮಾತನಾಡುತ್ತಿಲ್ಲ. ಆ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮೀಸಲಾತಿ ವಿಚಾರದಲ್ಲಿ ತಮ್ಮ ನಿಲುವನ್ನು ಘೋಷಿಸಬೇಕು. ಹಿಂದುಳಿದವರ್ಗಗಳ ರಾಜಕೀಯ ಮೀಸಲಾತಿಯನ್ನು ನೀಡದೆ ಚುನಾವಣೆ ನಡೆಸುವುದನ್ನು ಮುಂದೂಡಬೇಕು. ಸರ್ಕಾರ ಕೂಡಲೇ ವಿಶೇಷ ಅಧಿವೇಶನವನ್ನು ಕರೆದು ಆರು ತಿಂಗಳ ಕಾಲ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲು ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಬೇಕು. ಎಚ್.ಕಾಂತರಾಜ್ ರವರು ಆಯೋಗದ ವರದಿಯನ್ನು ಈ ಕೂಡಲೇ ಸರ್ಕಾರ ಒಪ್ಪಬೇಕು. ಆ ವರದಿಯನ್ನು ಮೂರು ಹಂತದ ಪರಿಶೀಲನೆಗೆ ಒಳಪಡಿಸಬೇಕು. ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಿನಾಂಕ 18.05.2022 ರ ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಸಂಘಟನೆಯ ಕೊರತೆ, ಅಧಿಕಾರ ಬಲದ ಕೊರತೆಯಿಂದ ನಿರಂತರ ಶೋಷಣೆ ಅನುಭವಿಸುತ್ತಿರುವ ಹಿಂದುಳಿದವರ್ಗಗಳು ರಾಜಕೀಯವಾಗಿ ತಬ್ಬಲಿಯ ಸ್ಥಿತಿಯನ್ನು ತಲುಪುತ್ತಿದ್ದಾರೆ. 1993 ರಲ್ಲಿ ಶೇ.33 ರಷ್ಟು ಇದ್ದ ಹಿಂದುಳಿದವರ್ಗಗಳ ಮೀಸಲಾತಿ 2010 ರ ನಂತರ ಶೇ.27 ಕ್ಕೆ ಇಳಿಕೆಯಾಗಿದೆ. ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸುಪ್ರೀಂ ಕೋರ್ಟ್ ಮೀಸಲಾತಿಯನ್ನು ಹೊರತುಪಡಿಸಿ ಚುನಾವಣೆ ನಡೆಸಲು ಸೂಚಿಸಿರುವುದರಿಂದ ಈ ವರ್ಗಗಳಿಗೆ ಮೀಸಲಾತಿ ಕೈತಪ್ಪುವ ಆತಂಕವಿದೆ. ಆದ್ದರಿಂದ ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸದಿದ್ದರೆ ಹಿಂದುಳಿದವರ ಮೀಸಲಾತಿಗೆ ಸಂಚಕಾರ ಬರುವುದು ಶತಸಿದ್ಧ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಈಗಲಾದರೂ ಎಚ್ಚೆತ್ತು ಕೂಡಲೇ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವುದರ ಜೊತೆಗೆ ವಿಧಾನಸಭೆಯಲ್ಲಿ ಆರು ತಿಂಗಳವರೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಿ ಮಸೂದೆಯನ್ನು ಮಂಡಿಸಿ ಚುನಾವಣೆಯನ್ನು ಮುಂದೂಡಬೇಕು ಹಾಗೂ ಶೀಘ್ರವಾಗಿ ಮೂರು ಹಂತದ ಪರಿಶೀಲನಾ ವರದಿಯನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿ ಮೀಸಲಾತಿಯನ್ನು ರಕ್ಷಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.