ಮೈಸೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೂರು ದಿನ ಬಾಕಿ ಇದ್ದು, ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ನಡುವೆ ಮೈಸೂರು-ಕೊಡಗು ಕ್ಷೇತ್ರದ ಮತಗಟ್ಟೆಗಳ ಸಂಖ್ಯೆ, ಮತದಾರರ ಸಂಖ್ಯೆ, ಭದ್ರತೆ, ಸಿದ್ದತೆ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ಮಾಹಿತಿ ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಸಿದ್ದತೆ ಕುರಿತು ಮಾತನಾಡಿದ ಮಾಹಿತಿ ನೀಡಿದ ಡಿಸಿ ಕೆ.ವಿ ರಾಜೇಂದ್ರ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2092222. ಈ ಪೈಕಿ ಪುರುಷರು 1026324, ಮಹಿಳೆಯರು 1065714, ಇತರರು 184 ಮಂದಿ ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 2202 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದ್ದು 9809 ಮತಗಟ್ಟೆ ಸಿಬ್ಬಂದಿಗಳನ್ನ ನೇಮಕ ಮಾಡಲಾಗಿದೆ.
ಏಪ್ರಿಲ್ 26ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತ ಚಲಾಯಿಸಲು ಅವಕಾಶವಿದೆ. ಮತಚಲಾಯಿಸಿದ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲು ವ್ಯವಸ್ಥೆ ಮಾಡಲಾಗಿದೆ. 473 ಕೆ ಎಸ್ ಆರ್ ಟಿ ಸಿ ಬಸ್ ಗಳು, 33 ಜೀಪ್ ಗಳು, 79 ಮಿನಿ ಬಸ್ ಗಳನ್ನ ಬಳಕೆ ಮಾಡಲಾಗುತ್ತಿದೆ ಎಂದು ಡಾ.ಕೆ.ವಿ ರಾಜೇಂದ್ರ ತಿಳಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 2202 ಮತಗಟ್ಟೆಗಳಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದ್ದು, 2202 ಮತಗಟ್ಟೆಗಳ ಪೈಕಿ 435 ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತು ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಮೈಸೂರು ಜಿಲ್ಲೆಯಲ್ಲಿ ಒಟ್ಟು 105 ಎಫ್ಐಆರ್ ಗಳನ್ನ ದಾಖಲು ಮಾಡಲಾಗಿದೆ. ಈ ಪೈಕಿ ಚುನಾವಣಾ ವೆಚ್ಚ ಸಂಬಂಧ 2 ಎಫ್ಐಆರ್ ,ಅಬಕಾರಿ ಕಾಯ್ದೆ ಉಲ್ಲಂಘನೆಯಡಿ 103 ಎಫ್ಐಆರ್ ಗಳು ದಾಖಲು ಮಾಡಲಾಗಿದೆ.
ಒಟ್ಟು 2,14,76,533 ನಗದು ವಶಪಡಿಸಿಕೊಳ್ಳಲಾಗಿದೆ. 1,08,65,72,850 ರೂಪಾಯಿ ಮೌಲ್ಯದ 1,25,54,191.41 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. 1,27,850 ಮೌಲ್ಯದ 4.894 ಕೆ.ಜಿ ಡ್ರಗ್ಸ್ ಮತ್ತು ನಾರ್ಕೋಟಿಕ್ಸ್, 2,85,000 ರೂಪಾಯಿ ಮೌಲ್ಯದ 46.4 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ 1,80,900 ರೂಪಾಯಿ ಮೌಲ್ಯದ ಚುನಾವಣಾ ಪ್ರಚಾರ ಸಾಮಗ್ರಿಗಳು ವಶಕ್ಕೆ ಪಡದಿದ್ದೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆಗೆ ಮೈಸೂರು ಜಿಲ್ಲೆಯಾದ್ಯಂತ ಮತದಾರರನ್ನು ಆಕರ್ಷಿಸಲು ವಿಶೇಷ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. 55 ಸಖಿ ಬೂತ್ ಗಳು, 11 ವಿಶೇಷ ಚೇತನರ ಬೂತ್ ಗಳು, 11 ಯುವ ಮತದಾರರ ಬೂತ್ ಗಳು, 12 ಥೀಮ್ ಬೇಸ್ ಡ್ ಬೂತ್ ಗಳು, 5 ಸಾಂಪ್ರದಾಯಿಕ ಬೂತ್ ಗಳು, 9 ಬುಡಕಟ್ಟು ಬೂತ್ ಗಳನ್ನ ಸ್ಥಾಪನೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಗಾಯತ್ರಿ ಹೇಳಿದರು.
ಅಂಗವಿಕಲರು ಮತ್ತು ಹಿರಿಯ ನಾಗರೀಕರು ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಿಗೂ ವೀಲ್ ಚೇರ್ ಹಾಗೂ ಬೂತಗನ್ನಡಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ದೃಷ್ಟಿ ದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್ ಪೇಪರ್ ಸಹ ಮತಗಟ್ಟೆಗೆ ರವಾನೆ ಮಾಡಲಾಗಿದೆ ಎಂದು ಸಿಇಒ ಗಾಯತ್ರಿ ಹೇಳಿದರು.
ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಉಪಸ್ಥಿತರಿದ್ದರು.