ಧಾರವಾಡ: ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣದ ಆರೋಪಿ ಫಯಾಜ್ ನನ್ನು ಧಾರವಾಡದ ಕಾರಾಗೃಹದಿಂದ ಸಿಐಡಿ ಪೊಲೀಸರು ಹುಬ್ಬಳ್ಳಿಗೆ ಬುಧವಾರ ಕರೆದೊಯ್ದರು.
ನೇಹಾ ಕೊಲೆ ಪ್ರಕರಣಕ್ಕೆ ಇಡೀ ರಾಜ್ಯವೇ ಆಘಾತ ವ್ಯಕ್ತಪಡಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದೆ. ಜತೆಗೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ತ್ವರಿತಗತಿಯ ನ್ಯಾಯಾಲಯ ತೆರೆಯುವ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದ್ದರು.
ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್‌ಗೆ ಸಿಐಡಿ ಅರ್ಜಿ ಸಲ್ಲಿಸಿತ್ತು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿಯನ್ನು 6 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿದೆ.
ಇದರ ಬೆನ್ನಲ್ಲೇ ಧಾರವಾಡ ಕಾರಾಗೃಹದಲ್ಲಿರುವ ಫಯಾಜ್‌ನನ್ನು ಸಿಐಡಿ ಎಸ್‌ಪಿ ವೆಂಕಟೇಶ್ ನೇತೃತ್ವದ ತಂಡ ಬುಧವಾರ ಘಟನಾ ಸ್ಥಳವಾದ ಹುಬ್ಬಳ್ಳಿಗೆ ಕರೆದೊಯ್ದಿದೆ. ಈ ವೇಳೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.