ನವದೆಹಲಿ : ಬಳಕೆದಾರರ ಗೌಪ್ಯತೆ ವಿಚಾರದಲ್ಲಿ ಆ್ಯಪಲ್ ಸಂಸ್ಥೆ ಬಹಳ ಕಟ್ಟುನಿಟ್ಟು. ವಾಟ್ಸಾಪ್ ಕೂಡ ಅದೇ ಪ್ರವೃತ್ತಿ ತೋರುತ್ತಿದೆ. ತನ್ನ ಪ್ಲಾಟ್ ಫಾರ್ಮ್ ನಲ್ಲಿ ಮೆಸೇಜ್ಗಳನ್ನು ಟ್ರೇಸ್ ಮಾಡಲು ಬಲವಂತಪಡಿಸಿದರೆ ಭಾರತದಲ್ಲಿ ಸೇವೆ ನಿಲ್ಲಿಸಬೇಕಾಗುತ್ತದೆ ಎಂದು ವಾಟ್ಸಾಪ್ ಎಚ್ಚರಿಕೆ ನೀಡಿದೆ.
ಮೊನ್ನೆಮೊನ್ನೆ ದೆಹಲಿ ಹೈಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ತನ್ನ ನಿಲುವನ್ನು ವಾಟ್ಸಾಪ್ ನಿವೇದಿಸಿಕೊಂಡಿದೆ. ವಾಟ್ಸಾಪ್ ಬಳಕೆದಾರರಿಗೆ ತಮ್ಮ ಗೌಪ್ಯತೆ ಬಗ್ಗೆ ಭದ್ರತಾ ಭಾವನೆ ಇದೆ. ಅದರಲ್ಲಿರುವ ಎನ್ಕ್ರಿಪ್ಷನ್ಗಳು ಬಳಕೆದಾರರ ಸಂದೇಶದ ಗೌಪ್ಯತೆಗೆ ಕಾರಣವಾಗಿದೆ. ಈ ಎನ್ಕ್ರಿಪ್ಷನ್ ವ್ಯವಸ್ಥೆಯನ್ನು ಸಡಿಲಗೊಳಿಸಿದರೆ ವಾಟ್ಸಾಪ್ ನ ವಿಶ್ವಾಸಾರ್ಹತೆ ಕಡಿಮೆ ಆಗುತ್ತದೆ ಎಂದು ವಾಟ್ಸಾನ್ ನ್ಯಾಯಾಲಯದ ಮುಂದೆ ವಿವರಣೆ ನೀಡಿದೆ.
ವಾಟ್ಸಾಪ್ ಅನ್ನು ಸೈಬರ್ ಕ್ರೈಮ್ಗಳಿಗೆ ಬಳಸಲಾಗುತ್ತಿದೆ. ಸಮಾಜ ಘಾತುಕ ಶಕ್ತಿಗಳು ಪ್ರಚೋದನಕಾರಿ ಸಂಗತಿಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿವೆ. ಹೀಗಾಗಿ, ಇಂಥ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ವಾಟ್ಸಾಪ್ ಸೇರಿದಂತೆ ಇತರ ಮೆಸೇಜಿಂಗ್ ಅಪ್ಲಿಕೇಶನ್ಗಳು ನೆರವಾಗಬೇಕು ಎಂದು ಭಾರತ ಸರ್ಕಾರ ಹಲವು ಬಾರಿ ಒತ್ತಾಯ ಹಾಕುತ್ತಿದೆ. ವಾಟ್ಸಾಪ್ ನಲ್ಲಿ ಪೋಸ್ಟ್ ಆಗುವ ಪ್ರತಿಯೊಂದು ಚ್ಯಾಟ್ ಎನ್ಕ್ರಿಪ್ಟ್ ಆಗಿರುತ್ತದೆ. ಇದರ ಕೀ ವಾಟ್ಸಾಪ್ಗೂ ಗೊತ್ತಿರುವುದಿಲ್ಲ. ಈ ವ್ಯವಸ್ಥೆಯನ್ನು ಸಡಿಲಗೊಳಿಸುವುದೆಂದರೆ ಬಳಕೆದಾರರಿಗೆ ವಾಟ್ಸಾಪ್ ಮೇಲಿನ ವಿಶ್ವಾಸ ಹೋಗಬಹುದು. ಭಾರತದ ಸಂವಿಧಾನದತ್ತವಾಗಿ ಸಿಗುವ ಗೌಪ್ಯತೆಯ ಉಲ್ಲಂಘನೆಯೂ ಆದಂತಾಗುತ್ತದೆ. ಈ ವಾದವನ್ನು ಮುಂದಿಟ್ಟುಕೊಂಡು ಭಾರತದ ಐಟಿ ನಿಯಮಗಳ ವಿರುದ್ಧ ನಿಲ್ಲಲು ವಾಟ್ಸಾಪ್ ನಿರ್ಧರಿಸಿದೆ.
ಭಾರತದಲ್ಲಿ 40 ಕೋಟಿ ಸಕ್ರಿಯ ವಾಟ್ಸಾಪ್ ಬಳಕೆದಾರರಿದ್ದಾರೆ. ಜಾಗತಿಕವಾಗಿ ಇರುವ ವಾಟ್ಸಾಪ್ ಬಳಕೆದಾರರಲ್ಲಿ ಹೆಚ್ಚಿನವರು ಭಾರತೀಯರಿದ್ದಾರೆ. ಅಲ್ಲದೇ ಭಾರತದಲ್ಲಿ ವಾಟ್ಸಾಪ್ನಲ್ಲಿ ಯುಪಿಐ ಪೇಮೆಂಟ್ ಫೀಚರ್ ಕೂಡ ಇದೆ. ಅಷ್ಟು ಸುಲಭಕ್ಕೆ ವಾಟ್ಸಾಪ್ ಭಾರತದ ವ್ಯವಹಾರವನ್ನು ಬಂದ್ ಮಾಡುವುದಿಲ್ಲ.
ಭಾರತದಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ವಾಟ್ಸಾಪ್ ಈ ರೀತಿಯಾಗಿ ಮೆಸೇಜ್ ಟ್ರೇಸಿಂಗ್ಗೆ ಒತ್ತಡಗಳನ್ನು ಎದುರಿಸುತ್ತಿದೆ. ಹಾಗೂ ಹೀಗೂ ಆ ಕಾನೂನುಗಳಿಗೆ ವಾಟ್ಸಾಪ್ ಪ್ರತಿರೋಧ ತೋರುತ್ತಾ ತನ್ನ ಗೌಪ್ಯತಾ ನೀತಿಯನ್ನು ಉಳಿಸಿಕೊಂಡು ಬರುತ್ತಿದೆ.