ಮನೆ ಕಾನೂನು ರಾಜಕೀಯ ಪಕ್ಷಗಳ ಚುನಾವಣಾಪೂರ್ವ ಭರವಸೆಗಳು ಮತದಾರರನ್ನು ಭ್ರಷ್ಟಗೊಳಿಸಿದಂತಲ್ಲ: ಹೈಕೋರ್ಟ್

ರಾಜಕೀಯ ಪಕ್ಷಗಳ ಚುನಾವಣಾಪೂರ್ವ ಭರವಸೆಗಳು ಮತದಾರರನ್ನು ಭ್ರಷ್ಟಗೊಳಿಸಿದಂತಲ್ಲ: ಹೈಕೋರ್ಟ್

0

ಬೆಂಗಳೂರು: ಚುನಾವಣೆಗೂ ಮುನ್ನ ರಾಜಕೀಯ ಪಕ್ಷವು ತಾವು ಅಧಿಕಾರಕ್ಕೆ ಬಂದಲ್ಲಿ ಕೆಲವು ನೀತಿಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡುವುದು ಪ್ರಜಾ ಪ್ರತಿನಿಧಿ ಕಾಯಿದೆ ಅಡಿಯಲ್ಲಿ ಮತದಾರರನ್ನು ಭ್ರಷ್ಟಗೊಳಿಸಿದಂತೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಚಾಮರಾಜಪೇಟೆ ಶಾಸಕ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದೆ.

Join Our Whatsapp Group

ಜಮೀರ್ ಆಹಮದ್ ಖಾನ್ ಆಯ್ಕೆಯನ್ನು ಪ್ರಶ್ನಿಸಿ ಅದೇ ಕ್ಷೇತ್ರದ ಮತದಾರ ಶಶಾಂಕ್ ಜೆ.ಶ್ರೀಧರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

”ಅಲ್ಲದೆ, ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳು ಮತ್ತು ಉಚಿತ ಉಡುಗೊರೆಗಳು ಸಮಾಜದ ಒಂದು ವರ್ಗವನ್ನು ಓಲೈಸಿದಂತಾಗುತ್ತದೆಯೇ ಎಂಬ ಬಗ್ಗೆ ಚರ್ಚೆ ನಡೆಯಬೇಕಿದೆ. ಅಂತಹ ಭರವಸೆಗಳ ಈಡೇರುವ ಸಾಧ್ಯತೆಗಳ ಬಗ್ಗೆ ಮಾತದಾರರೇ ಜಾಗೃತರಾಗಬೇಕು. ನಿರ್ದಿಷ್ಟ ಪಕ್ಷಕ್ಕೆ ಮತ ಹಾಕಬೇಕೇ, ಬೇಡವೇ ಎಂಬ ಬಗ್ಗೆಯೂ ಅವರೇ ನಿರ್ಧರಿಸುತ್ತಾರೆ. ಇದು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123ರ ಅನ್ವಯ ಮತದಾರರನ್ನು ಭ್ರಷ್ಟರನ್ನಾಗಿ ಮಾಡಿದಂತಾಗುವುದಿಲ್ಲ” ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಎಸ್.ಸುಬ್ರಮಣ್ಯಂ ಬಾಲಾಜಿ ವಿರುದ್ಧ ತಮಿಳುನಾಡು ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿರುವ ನ್ಯಾಯಪೀಠ, ”ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳು ಸಾಮಾಜಿಕ ಕಲ್ಯಾಣದ ನೀತಿಗಳಾಗಿವೆ. ಅವು ಆರ್ಥಿಕವಾಗಿ ಕಾರ್ಯಸಾಧ್ಯವೇ, ಇಲ್ಲವೇ ಎಂಬುದು ಬೇರೆ ವಿಚಾರ. ಆ ಯೋಜನೆಗಳ ಅನುಷ್ಠಾನದಿಂದ ರಾಜ್ಯ ಸರ್ಕಾರದ ಖಜಾನೆ ದಿವಾಳಿಯಾಗುತ್ತದೆ ಎಂಬುದನ್ನು ಪ್ರತಿಪಕ್ಷಗಳು ಸಾಬೀತುಪಡಿಸಬೇಕು. ಆ ಯೋಜನೆಗಳನ್ನು ಅಥವಾ ನೀತಿಗಳನ್ನು ತಪ್ಪು ಎಂದು ವ್ಯಾಖ್ಯಾನಿಸಬಹುದು. ಆದರೆ, ಅವುಗಳು ಭ್ರಷ್ಟಾಚಾರಕ್ಕೆ ಕಾರಣವಾಗುತ್ತವೆ ಎಂದು ಹೇಳಲಾಗದು” ಎಂದು ಪೀಠ ತಿಳಿಸಿದೆ.

”ಅರ್ಜಿ ವಿಚಾರಣೆ ವೇಳೆ ಅರ್ಜಿದಾರರು ಪ್ರತಿವಾದಿ ವೈಯಕ್ತಿಕವಾಗಿ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯವನ್ನು ಸಲ್ಲಿಸಿಲ್ಲ. ಕೇವಲ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಅದೊಂದೇ ಆಧಾರದಲ್ಲಿ ಪ್ರತಿವಾದಿ ಆಯ್ಕೆ ಅನೂರ್ಜಿತಗೊಳಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು, ”ಪಂಚ ಗ್ಯಾರಂಟಿಗಳನ್ನು ಮುಂದಿಟ್ಟು ಜಮೀರ್ ಆಹಮದ್ ಖಾನ್ ಮತದಾರರನ್ನು ಓಲೈಸಿ ಮತ ಕೋರಿದ್ದಾರೆ. ಆ ಮೂಲಕ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಹಾಗಾಗಿ, ಅದು ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಮತದಾರರನ್ನು ಭ್ರಷ್ಟರನ್ನಾಗಿ ಮಾಡಿದಂತಾಗಿದೆ. ಆದ್ದರಿಂದ ಜಮೀರ್ ಆಹಮದ್ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು” ಎಂದು ತಮ್ಮ ಅರ್ಜಿಯಲ್ಲಿ ಕೋರಿದ್ದರು.