ಮನೆ ರಾಜ್ಯ ಕಾನೂನುಬಾಹಿರ ಕೃತ್ಯಗಳ ಬಗ್ಗೆ ದೂರು: ಶೀಘ್ರ ಸೂಕ್ತ ಕ್ರಮ- ಐಜಿಪಿ

ಕಾನೂನುಬಾಹಿರ ಕೃತ್ಯಗಳ ಬಗ್ಗೆ ದೂರು: ಶೀಘ್ರ ಸೂಕ್ತ ಕ್ರಮ- ಐಜಿಪಿ

0

ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ ಜೂಜಾಟದ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಗೊಂಡು ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲಾಗುವುದು ಎಂದು ಬಳ್ಳಾರಿ ವಲಯದ ಐಜಿಪಿ ಆರ್.ಎಸ್. ಲೋಕೋಶ್ ಕುಮಾರ ಹೇಳಿದರು.

Join Our Whatsapp Group

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಎಷ್ಟೇ ನಿಗಾವಹಿಸಿದರೂ ಇಸ್ಪೀಟ್ ಮತ್ತು ಮಟ್ಕಾ ಜೂಜಾಟಗಾರರು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಕ್ಕರೆ ಪೊಲೀಸರಿಗೆ ನೀಡಬಹುದು ಎಂದು ಕರೆ ನೀಡಿದರು.

ಇಸ್ಪೀಟ್, ಮಟ್ಕಾ ಜೂಜಾಟ, ಅಕ್ರಮ ಮರಳು ದಂಧೆ ಸೇರಿದಂತೆ ಜನವಸತಿ ಪ್ರದೇಶದಲ್ಲಿ ಏನೇ ಅನೈತಿಕ, ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಜನರು ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡುವ ಅಗತ್ಯವಿಲ್ಲ. ಕೇವಲ ತಮ್ಮ ಮೊಬೈಲ್​​ನಿಂದ 112ಗೆ ಕರೆ ಮಾಡಿ ಮಾಹಿತಿ ನೀಡಿದರೆ, ಕೇವಲ ಆರು ನಿಮಿಷದಲ್ಲಿ 112 ವಾಹನ ಸ್ಥಳಕ್ಕೆ ಬರುತ್ತದೆ. 112ಗೆ ಕರೆ ಮಾಡಿ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಅಕ್ರಮಗಳನ್ನು ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕು. ಜನರು ಜಾಗೃತರಾದರೆ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಬರುತ್ತವೆ ಎಂದು ತಿಳಿಸಿದರು.

ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಲು ಹಿಂದೇಟು: ಜನಸಾಮಾನ್ಯರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೆ ತಕ್ಷಣಕ್ಕೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಯಾರೇ ಬಂದು ದೂರು ನೀಡಿದರೂ ಪೊಲೀಸರು ತಕ್ಷಣ ಸ್ವೀಕರಿಸಿ ಅವರಿಗೆ ಹಿಂಬರಹ ನೀಡಬೇಕು. ದೂರು ಪರಿಶೀಲಿಸಿ ಸೂಕ್ತವಾಗಿದ್ದಲ್ಲಿ ಪ್ರಕರಣ ದಾಖಲಿಸಬೇಕು. ಈ ಬಗ್ಗೆ ಸಂಬಂಧಿತ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಕಳೆದ ಒಂದುವರೆ ದಶಕದಿಂದ ಜನಸ್ನೇಹಿ ಪೊಲೀಸ್ ಎಂಬ ಧ್ಯೇಯದಿಂದ ಇಲಾಖೆ ಕೆಲಸ ಮಾಡುತ್ತಿದೆ. ಆದರೂ ಕೂಡ ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಬಾಂಧವ್ಯ ಅಷ್ಟಕ್ಕಷ್ಟೇ ಇದೆ. ಇದನ್ನು ಹೋಗಲಾಡಿಸಲು ಇಲಾಖೆ ಇನ್ನಷ್ಟು ಕ್ರಮ ಕೈಗೊಳ್ಳಲಿದೆ. ಪೊಲೀಸರ ಇಲಾಖೆಯನ್ನು ಇತ್ತಷ್ಟು ಜನ ಸ್ನೇಹಿಯಾಗಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಬಳ್ಳಾರಿ ವಲಯದ ಐಜಿಪಿ ಆರ್.ಎಸ್.ಲೋಕೋಶ್ ಕುಮಾರ್ ಭರವಸೆ ನೀಡಿದರು.