ಶಿವಮೊಗ್ಗ: ನಿನ್ನೆ ನಡೆದ 14 ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಚುನಾವಣೆ ನಡೆದಿದೆ. ಮೈಸೂರು, ಚಾಮರಾನಗರ, ಹಾಸನ ಸೇರಿದಂತೆ ಎಲ್ಲ ಕಡೆಗಳಲ್ಲಿ ಉತ್ತಮ ಮತದಾನ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿರುವ ತಮ್ಮ ಮನೆಯಲ್ಲಿ ಇಂದು (ಶನಿವಾರ) ಮಾತನಾಡಿದ ಅವರು, ಕಾಂಗ್ರೆಸ್ ಅಲ್ಪಸಂಖ್ಯಾಂತರ ಓಲೈಕೆ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ಅಲ್ಪಸಂಖ್ಯಾಂತರಿಗೆ ಓಬಿಸಿ ಅವಕಾಶ ಕೊಡುವ ಚಿಂತನೆ ಮಾಡುತ್ತಿದ್ದಾರೆ. ಇದರಿಂದ ಓಬಿಸಿ ಸಮುದಾಯದವರಿಗೆ ಅನ್ಯಾಯ ಮಾಡುತ್ತಾರೆ ಎಂಬ ಭಾವನೆ ಮೂಡಿದೆ’ ಎಂದರು.
‘ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾಳೆ ಮೋದಿ ಅವರು, ಬೆಳಗಾವಿ, ಉತ್ತರ ಕನ್ನಡ ಹಾಗೂ ದಾವಣಗೆರೆ ಮತ್ತು ಹೊಸಪೇಟೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಇದು ಮುಂದಿನ 14 ಲೋಕಸಭ ಕ್ಷೇತ್ರದ ಪ್ರವಾಸದ ಮೇಲೂ ಬಿರುತ್ತದೆ ಎಂದರು.
ಮೊದಲೇ ಹೇಳುತ್ತಿದ್ದಂತೆ 28ಕ್ಕೆ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಹೇಳಿಕೆಗೆ ನಿನ್ನೆ ನಡೆದ 14 ಕ್ಷೇತ್ರದ ಮತದಾನ ಆಗಿರುವುದನ್ನು ಗಮನಿಸಿದರೆ, 14ಕ್ಕೆ 14 ಸ್ಥಾನಗಳನ್ನು ಗೆಲ್ಲುವ ವಾತವರಣವಿದೆೆ. ಇದರಿಂದ ಕಾಂಗ್ರೆಸ್ನವರು ನನಗೆ ತಲೆ ಕೆಟ್ಟಿದೆ ಎಂದು ಹೇಳಬಹುದು. ದಿನದಿಂದ ದಿನಕ್ಕೆ ನೋಡ್ತಾ ಹೋದರೆ, ನಮ್ಮ ಗುರಿಯನ್ನು ತಲುಪುತ್ತೇವೆ ಎಂಬ ಭಾವನೆ ನಮ್ಮಲ್ಲಿ ಬರುತ್ತಿದೆ. ನಿನ್ನೆ ನಡೆದ ಚುನಾವಣೆಯಲ್ಲಿ ಕೆಲವು ಕಡೆ ಕಡಿಮೆ, ಇನ್ನೂ ಕೆಲವು ಕಡೆ ಜಾಸ್ತಿ ಆಗಿದೆ. ದೇಶದೆಲ್ಲೆಡೆ ಶೇ 65ರಿಂದ 68ರಷ್ಟು ಮತದಾನವಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ತಕ್ಕ ಮಟ್ಟಿಗೆ ಚೆನ್ನಾಗಿ ಮತದಾನವಾಗಿದೆ ಎಂದು ಹೇಳಬಹುದು.
ರಾಹುಲ್ ಗಾಂಧಿ ಅವರು ಅಮೇಥಿಯಂತಹ ಕ್ಷೇತ್ರದಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ಕೇರಳದ ವೈಯನಾಡಿನಲ್ಲಿ ಅವಿತು ಕುಳಿತು ಕೊಂಡಿದ್ದಾರೆ. ವೈಯನಾಡಿನಲ್ಲಿ ಶೇ 70 ಕ್ಕೂ ಹೆಚ್ಚು ಅಲ್ಪಸಂಖ್ಯಾತರಿದ್ದಾರೆ. ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗಿರುವ ವೈಯನಾಡಿನಲ್ಲಿ ಅಡಗಿ ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಕಾಂಗ್ರೆಸ್ನ ಪ್ರಧಾನಮಂತ್ರಿ ಅಭ್ಯರ್ಥಿಗೆ ಯಾಕೆ ಈ ಪರಿಸ್ಥಿತಿ? ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದ ಅಮೇಥಿ ಕ್ಷೇತ್ರದ ಜನ ಗಾಂಧಿ ಕುಟುಂಬಕ್ಕೆ ಆರ್ಶೀವಾದ ಮಾಡಿದ್ದರು. ಇಂತಹ ಕ್ಷೇತ್ರದ ಜನ ಯಾಕೆ ರಾಹುಲ್ ಗಾಂಧಿಯನ್ನು ಧಿಕ್ಕರಿಸಿದ್ದಾರೆ ಎಂದು ಮೊದಲು ಯೋಚಿಸಬೇಕು ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ನಮ್ಮ ರಾಘಣ್ಣ 2.50 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಬಹುದು ಎಂದು ಕೊಂಡಿದ್ದೇವೆ. ರಾಹುಲ್ ಗಾಂಧಿ ಪ್ರಚಾರಕ್ಕೆ ಬರುವುದರಿಂದ ಇನ್ನೂ 50 ಸಾವಿರ ಹೆಚ್ಚು ಮತಗಳನ್ನು ರಾಘಣ್ಣ ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.