ಕಲಬುರಗಿ: ಸುಪ್ರೀಂ ಕೋರ್ಟಿನ ಸೂಚನೆಯ ಮೇರೆಗೆ ಕೇಂದ್ರ ಸರ್ಕಾರ 3464 ಕೋಟಿ ರೂ. ಬರ ಪರಿಹಾರ ನೀಡುತ್ತಿದ್ದು, ಇದು ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯ ಕಾಲು ಭಾಗವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ಬಿಡುಗಡೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ರಾಜ್ಯ 18,172 ಕೋಟಿ ರೂ. ಪರಿಹಾರ ಕೇಳಿದ್ದೇವೆ, 35 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದ್ದು, 48 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿತ್ತ ಮಂತ್ರಿ ನಿರ‍್ಮಲಾ ಸೀತಾರಾಂ ಅವರು ರಾಜ್ಯ ವಿಳಂಬವಾಗಿ ಮನವಿ ಸಲ್ಲಿಸಿದೆ ಎಂದು ಸುಳ್ಳು ಹೇಳಿದ್ದಾರೆ ಎಂದರು.
ಆಮೇಲೆ ನಿರ್ಮಲಾ ಸೀತಾರಾಮನ್ ಅವರು ಇವರು ಬರಗಾಲಕ್ಕೆ ಮನವಿ ಕೊಟ್ಟಿಲ್ಲ, ಗ್ಯಾರಂಟಿಗಳಿಗೆ ಹಣ ಕೇಳಿದ್ದಾರೆ ಎಂದರು. ನಾವು ಗ್ಯಾರಂಟಿಗಳಿಗೆ ಒಂದು ಪೈಸವೂ ಕೇಳಿಲ್ಲ, ಕೇಳೋದೂ ಇಲ್ಲ. ಇಬ್ಬರೂ ಸುಳ್ಳು ಹೇಳಿದರು ಎಂದು ಸ್ಪಷ್ಟ ಪಡಿಸಿದರು.
ʼನಾನು ಡಿಸೆಂಬರ್ 19 ರಂದು ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟದ ಕುರಿತು ಅವರ ಗಮನಕ್ಕೆ ತಂದು, 18172 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿದ್ದು, ಶೀಘ್ರವೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆನು. ಅದಕ್ಕೆ ಅವರು ಕೂಡಲೇ ಸಂಬಂಧಪಟ್ಟವರಿಗೆ ತಿಳಿಸುವುದಾಗಿ ನುಡಿದರು.
ಡಿಸೆಂಬರ್ 20 ರಂದು ಅಮಿತ್ ಷಾ ಅವರನ್ನು ಭೇಟಿ ಮಾಡಿದಾಗ ಡಿಸೆಂಬರ್ 23 ಕ್ಕೆ ಉನ್ನತ ಮಟ್ಟದ ಸಮಿತಿ ಸಭೆ ಕರೆದು ತೀರ್ಮಾನ ಮಾಡುವುದಾಗಿ ತಿಳಿಸಿದರು. ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಂತರ ತೀರಾ ಕಡಿಮೆ ಪರಿಹಾರ ಒದಗಿಸಿದ್ದಾರೆ. ನಾವು 18174 ಕೋಟಿ ಕೇಳಿದರೆ ಅವರು 3454 ಕೋಟಿ ಕೊಟ್ಟಿದ್ದಾರೆ. ಅತ್ಯಂತ ಕಡಿಮೆಯಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು” ಎಂದು ಸಿದ್ದರಾಮಯ್ಯ ಅವರು ತಿಳಿಸಿದರು..
ಸುಪ್ರೀಂ ಕೋರ್ಟ್ ಮುಂದೆ ರಿಟ್ ಪೆಟಿಷನ್ ಹಾಕಿದಾಗ ಭಾರತ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಮತ್ತು ಸಾಲಿಟಿಸಿಟರ್ ಜನರಲ್ ಹಾಜರಾದರು. ಅವರು ನಿರ್ಮಲಾ ಸೀತಾರಾಮನ್ ಹೇಳುವ ಮಾತುಗಳಾಗಲಿ, ಅಮಿತ್ ಷಾ ಹೇಳುವ ಮಾತುಗಳನ್ನಾಗಲಿ ಸಲ್ಲಿಸಿಲ್ಲ. ಅವರು ಹೇಳಿದ್ದು ನಿಜವೇ ಆಗಿದ್ದರೆ ಅವರ ಹೇಳಿಕೆಗಳನ್ನು ಹೇಳಲಿಲ್ಲ. ಸುಪ್ರೀಂ ಕೋರ್ಟ್ ಅವರಿಗೆ ರಾಜ್ಯ ಸರ್ಕಾರಗಳು ಇಂತಹ ವಿಚಾರಗಳಲ್ಲಿ ಕೋರ್ಟ್ ಮೊರೆ ಹೋಗುವುದು ಸರಿ ಇಲ್ಲ. ಈ ವಿಷಯವನ್ನು ಬೇಗನೆ ಇತ್ಯರ್ಠ ಮಾಡಿ ಎಂದು ಹೇಳಿದ್ದಕ್ಕೆ ಅವರು ಎರಡು ವಾರಗಳ ಸಮಯಾವಕಾಶ ಕೇಳಿದ್ದರು. ಎರಡು ವಾರವಾದ ಮೇಲೆ ಇನ್ನೂ ಒಂದು ವಾರ ಸಮಯ ಕೇಳಿದ್ದಾರೆ. ಈಗ 28ಕ್ಕೆ ಪ್ರಕರಣ ವಿಚಾರಣೆಗೆ ಬರಲಿದೆ. ಈ ನಡುವೆ ಕೇಂದ್ರ ಸರ್ಕಾರ 3454 ಕೋಟಿ ಕೊಟ್ಟಿದ್ದಾರೆ. ನಾವು ಕೇಳಿದ ಮೊತ್ತದ ನಾಲ್ಕನೇ ಒಂದು ಭಾಗಕ್ಕಿಂತಲೂ ಕಡಿಮೆಯಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಪ್ರಧಾನಿ ಹುದ್ದೆಯ ಘನತೆಗೆ ಧಕ್ಕೆ ತರುವ ಕೆಲಸ
ನರೇಂದ್ರ ಮೋದಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಅಪ್ರಸ್ತುತ ವಿಷಯಗಳನ್ನು ಹೇಳುವುದು, ಜನರ ಭಾವನೆಗಳನ್ನು ಕೆರಳಿಸುವುದು, ಧ್ರುವೀಕರಣ ಮಾಡುವ ಮೂಲಕ ಅವರ ಘನತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇದರಿಂದ ನಮಗೇನೂ ಹಾನಿಯಿಲ್ಲ. ಜನರು ಸುಳ್ಳ ಹೇಳಿದರೆ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದ್ದಾರೆ.
ಮೀಸಲಾತಿ ಮತ್ತು ಮಂಗಳಸೂತ್ರದ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇನ್ನೂ ಕ್ರಮ ಕೈಗೊಂಡಿಲ್ಲ. ಅವರಿಗೆ ನೋಟೀಸು ಕೊಟ್ಟಿದ್ದಾರೆ. ನಾವು ಕ್ರಮ ಕೈಗೊಳ್ಳುವ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ. ಪಕ್ಷದ ಅಧ್ಯಕ್ಷರಿಗೆ ನೀಡಿದ್ದಾರೆ. ಬೇರೆ ವಿಚಾರದಲ್ಲಿ ಮೋದಿಯವರಿಗೂ ನೋಟೀಸು ನೀಡಿದ್ದಾರೆ ಎಂದು ತಿಳಿಸಿದರು.
ನಾವು ಸ್ಪಷ್ಟವಾಗಿ ಜನರಿಗೆ ನಾವು ಏನು ಮಾಡಿದ್ದೇವೆ ಎಂದು ಪ್ರಸ್ತಾಪ ಮಾಡಿದ್ದೇವೆ. ಕೇಂದ್ರ ಸರ್ಕಾರ ಏನು ಹೇಳಿದ್ದರು, ಏನು ಮಾಡಿದ್ದಾರೆ ಎಂಬುದನ್ನೆಲ್ಲ ಹೇಳಿದ್ದೇವೆ. ಜನರು ನೀಡುವ ತೀರ್ಪು ಅಂತಿಮ. ನಮ್ಮ ಐದು ಗ್ಯಾರಂಟಿಗಳು ಮತ್ತೆ ನುಡಿದಂತೆ ನಡೆದಿರುವುದು ಜನರ ಮೇಲೆ ಪರಿಣಾಮವಾಗಿದೆ. ಮತ್ತು ಕಾಂಗ್ರೆಸ್ ಬಗ್ಗೆ ವಿಶ್ವಾಸ, ನಂಬಿಕೆ ಬಂದಿದೆ ಎಂಬ ವಿಶ್ವಾಸ ನನ್ನದು ಎಂದು ತಿಳಿಸಿದರು.
ಜನ ತಮ್ಮ ವಿವೇಚನೆಯ ಮೇರೆಗೆ ತೀರ್ಪು ಕೊಡುತ್ತಾರೆ. ನಮ್ಮ ಮಾತುಗಳನ್ನೂ ಗಮನಕ್ಕೆ ತೆಗೆದುಕೊಳ್ಳುತ್ತಾರೆ, ಜನರನ್ನು ದಡ್ಡರೆಂದು ನಾವು ತಿಳಿದುಕೊಂಡರೆ, ನಾವೇ ದಡ್ಡರು. ಅವರು ಬುದ್ಧಿವಂತರು ಹಾಗೂ ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ಎಲ್ಲ ಕಾಲದಲ್ಲೂ ನೋಡಿ, ಜನರು ಬಹಳ ಬುದ್ಧಿವಂತಿಕೆಯಿಂದ ಮತ ಚಲಾಯಿಸಿದ್ದಾರೆ ಎಂದು ನುಡಿದರು.
ಅಭ್ಯರ್ಥಿಯ ಮೇಲೆ ಮತ್ತೊಬ್ಬ ಅಭ್ಯರ್ಥಿಯೇ ಪ್ರಭಾವ ಬೀರಿರಬಹುದು. ಅದಕ್ಕಾಗಿಯೇ ಪಕ್ಷದ ಅಭ್ಯರ್ಥಿ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕರ್ನಾಟಕದ ಬಗ್ಗೆ ಅವರಿಗೆ ಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ. ಇಲ್ಲಿನ ವಿಚಾರಗಳನ್ನು ತಿಳಿದುಕೊಂಡಿದ್ದಾರೋ ಇಲ್ಲವೋ ಅನ್ನೋದು ಕೂಡ ಗೊತ್ತಿಲ್ಲ. ನನಗೂ ಡಿ.ಕೆ. ಶಿವಕುಮಾರ್ ಅವರಿಗೂ ಶೀತಲ ಸಮರ ಇಲ್ಲ ಎಂದು ಸ್ಪಷ್ಟಪಡಿಸಿದರು. ಅವರು ಅಸ್ಸಾಂ ಮುಖ್ಯಮಂತ್ರಿ. ಈ ದೇಶದ ಪ್ರಧಾನ ಮಂತ್ರಿಯೂ ಅಲ್ಲ, ಕರ್ನಾಟಕದ ವಿರೋಧ ಪಕ್ಷದ ನಾಯಕರೂ ಅಲ್ಲ, ಬಿಜೆಪಿ ಅಧ್ಯಕ್ಷರೂ ಅಲ್ಲ ಎಂದು ತಿಳಿಸಿದರು.
ಚುನಾವಣಾ ಅಕ್ರಮ: ಯಾರೇ ಆದರೂ ಕ್ರಮ ಕೈಗೊಳ್ಳಿ
ಕಾಂಗ್ರೆಸ್ ಪಕ್ಷಕ್ಕೆ ಸೇರಿದೆಯೆನ್ನಲಾದ ಎರಡು ಕೋಟಿ ಹಣ ಸಿಕ್ಕಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ನನಗೆ ಈ ಬಗ್ಗೆ ತಿಳಿದಿಲ್ಲ. ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿ ಎಂದರು. ಜೊತೆಗೆ ಬಿಜೆಪಿಯ ಡಾ. ಸುಧಾಕರ್ ಅವರಿಗೆ ಸೇರಿದ 4.8 ಕೋಟಿ ರೂ. ದೊರೆತಿದ್ದು, ಮಹಜರು ನಡೆದು, ಎಫ್.ಐ.ಆರ್. ಅಗಿದೆಯಲ್ಲ. ಅದಕ್ಕೆ ಏನು ಹೇಳುತ್ತೀರಿ? ಯಾರೇ ಅಕ್ರಮ ಮಾಡಿದರೂ ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನಿಸಿದರು.