ಮನೆ ರಾಜಕೀಯ ಬರ ಪರಿಹಾರವನ್ನು ಚುನಾವಣೆಗೆ ಬಳಸಿಕೊಳ್ಳುವ ಅನುಮಾನ, ಡಿಬಿಟಿ ಮುಖಾಂತರವೇ ಪರಿಹಾರ ನೀಡಿ: ಆರ್‌.ಅಶೋಕ ಆಗ್ರಹ

ಬರ ಪರಿಹಾರವನ್ನು ಚುನಾವಣೆಗೆ ಬಳಸಿಕೊಳ್ಳುವ ಅನುಮಾನ, ಡಿಬಿಟಿ ಮುಖಾಂತರವೇ ಪರಿಹಾರ ನೀಡಿ: ಆರ್‌.ಅಶೋಕ ಆಗ್ರಹ

0

ಹುಬ್ಬಳ್ಳಿ: ಫ್ರೂಟ್ಸ್‌ ತಂತ್ರಾಂಶದ ನೆಪದಲ್ಲಿ ಕಾಂಗ್ರೆಸ್‌ ಸರ್ಕಾರ ಬರ ಪರಿಹಾರವನ್ನು ಚುನಾವಣೆಗೆ ಬಳಸಿಕೊಳ್ಳುವ ಅನುಮಾನವಿದೆ. ಡಿಬಿಟಿ ಮುಖಾಂತರವೇ ರೈತರಿಗೆ ಪರಿಹಾರ ನೀಡಬೇಕೆಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರ ಒಂದೇ ಸಲಕ್ಕೆ 3,454 ಕೋಟಿ ರೂ. ಪರಿಹಾರ ನೀಡಿದ ಏಕೈಕ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಮಾತ್ರ. ಹಿಂದಿನ ಕಾಂಗ್ರೆಸ್‌ನ ಯಾವುದೇ ಸರ್ಕಾರಗಳು ಇಷ್ಟು ಹಣ ನೀಡಿರಲಿಲ್ಲ. ಆದರೆ ಈ ಹಣವನ್ನು ಬೇರೆ ರಾಜ್ಯಗಳಿಗೆ ಚುನಾವಣೆಗಾಗಿ ಕಳುಹಿಸುವ ನೀಚ ಕೆಲಸವನ್ನು ಕಾಂಗ್ರೆಸ್‌ ಮಾಡಬಾರದು. ಫ್ರೂಟ್ಸ್‌ನಲ್ಲಿ ಇನ್ನೂ ರೈತರ ನೋಂದಣಿಯಾಗಿಲ್ಲ. ಈ ಹಣ ದುರ್ಬಳಕೆ ಮಾಡಲು ಈ ರೀತಿ ಸಂಚು ಮಾಡಲಾಗಿದೆ. ಡಿಬಿಟಿ ಮೂಲಕ ರೈತರಿಗೆ ನೇರವಾಗಿ ಹಣ ನೀಡಬೇಕು. ಇದರ ದುಪ್ಪಟ್ಟು ಮೊತ್ತವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರಕಾರ ಇದು ಆನೆಗೆ ಅರೆಕಾಸಿನ ಮಜ್ಜಿಗೆಯಂತೆ. ಆದರೆ ಕಾಂಗ್ರೆಸ್‌ ಆನೆಗೆ ಸಾಸಿವೆ ಕಾಳಿನಷ್ಟೂ ಪರಿಹಾರ ನೀಡಿಲ್ಲ. 2008 ರಲ್ಲಿ ಬರ ಬಂದಾಗ 516 ಕೋಟಿ ರೂ. ಕೇಳಿದರೆ 1.16 ಕೋಟಿ ರೂ. ಪರಿಹಾರ ನೀಡಿದ್ದರು. 2010-11 ರಲ್ಲಿ ಪ್ರವಾಹವಾದಾಗ 1,045 ಕೋಟಿ ರೂ. ಕೇಳಿದಾಗ ನಯಾಪೈಸೆಯೂ ನೀಡಲಿಲ್ಲ. ಇವರನ್ನು ಪುಣ್ಯಾತ್ಮರು ಅನ್ನಬೇಕೋ, ಪಾಪಾತ್ಮರು ಎನ್ನಬೇಕೋ? ಆಗ ಕಾಂಗ್ರೆಸ್‌ ಸಂಸದರು ಏನು ಮಾಡಿದ್ದರು? ಸಿದ್ದರಾಮಯ್ಯ ಆಗ ನಿದ್ದೆ ಮಾಡುತ್ತಿದ್ದರಾ? ಎಂದು ಪ್ರಶ್ನೆ ಮಾಡಿದರು.

2019-20 ರಲ್ಲಿ ಪ್ರವಾಹವಾದಾಗ ರಾಜ್ಯ ಸರ್ಕಾರ 3,837 ಕೋಟಿ ರೂ. ಕೇಳಿದ್ದು, ಕೇಂದ್ರ ಸರ್ಕಾರ 3412 ಕೋಟಿ ರೂ. ನೀಡಿತ್ತು. ಅಂದರೆ ಇದು 88% ಆಗಿತ್ತು. 2020-21 ರಲ್ಲಿ ಪ್ರವಾಹವಾದಾಗ 2,242 ಕೋಟಿ ರೂ. ಕೇಳಿದ್ದು, ಕೇಂದ್ರ ಸರ್ಕಾರ 1480 ಕೋಟಿ ರೂ. ಅಂದರೆ 66% ನೀಡಿತ್ತು. ಒಟ್ಟಾರೆಯಾಗಿ 25,591 ಕೋಟಿ ರೂ. ಕೇಳಿದ್ದು, ಪ್ರಧಾನಿ ಮೋದಿ 15,920 ಕೋಟಿ ರೂ. ನೀಡಿದ್ದಾರೆ. ನರೇಂದ್ರ ಮೋದಿ ಸರ್ಕಾರ ಒಟ್ಟು 62% ನೀಡಿದ್ದು, ಮನಮೋಹನ್‌ ಸಿಂಗ್‌ ಸರ್ಕಾರ ಕೇವಲ 10% ನೀಡಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಲಿ ಎಂದು ಒತ್ತಾಯಿಸಿದರು.

ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಅನುಮತಿ ಕೇಳಿದ್ದರು. ಅದನ್ನು ತಿಳಿದುಕೊಂಡು ಕಾಂಗ್ರೆಸ್‌ ನಾಯಕರು ನಾವೇ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಸರ್ಕಾರದ ಬಳಿ ಹಣವಿದೆ ಎಂದರೆ ದುಪ್ಪಟ್ಟು ಪರಿಹಾರ ನೀಡಲಿ. ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ 6,800 ರೂ. ಮಾರ್ಗಸೂಚಿ ದರವಿದ್ದು, ಬಿಜೆಪಿ ಸರ್ಕಾರದಿಂದ ಹೆಚ್ಚುವರಿಯಾಗಿ 6,800 ರೂ. ಸೇರಿಸಿ ಒಟ್ಟು 13,600 ರೂ. ನೀಡಲಾಗಿತ್ತು. ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ 13,500 ರೂ. ಮಾರ್ಗಸೂಚಿ ದರವಿದ್ದು, ಬಿಜೆಪಿ ಸರ್ಕಾರದಿಂದ 11,500 ರೂ. ಸೇರಿಸಿ ಒಟ್ಟು 25,000 ರೂ. ನೀಡಲಾಗಿತ್ತು. ಬಹುವಾರ್ಷಿಕ ಬೆಳೆ ಜಮೀನಿಗೆ 18,000 ರೂ. ಮಾರ್ಗಸೂಚಿ ದರವಿದ್ದು, ಬಿಜೆಪಿ ಸರ್ಕಾರದಿಂದ 10,000 ರೂ. ಸೇರಿಸಿ ಒಟ್ಟು 28,000 ರೂ. ನೀಡಲಾಗಿತ್ತು ಎಂದು ನೆನಪಿಸಿದರು.

ಸಂಪತ್ತಿನ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು. ಇದರಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ. ಹಿಂದುಳಿದ ವರ್ಗಗಳ ಮೀಸಲನ್ನು ಅಲ್ಪಸಂಖ್ಯಾತರಿಗೆ ನೀಡುವುದಾದರೆ ಹಿಂದುಳಿದ ವರ್ಗಗಳ ಮಕ್ಕಳ ಉದ್ಯೋಗ, ವ್ಯಾಸಂಗ ಏನಾಗಬೇಕು? ಇದು ಸಂವಿಧಾನ ತಿರುಚುವ ಪ್ರಯತ್ನ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲು ಇಲ್ಲ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಇವರು ಅಂಬೇಡ್ಕರ್‌ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಪ್ರಕ್ರಿಯೆ ಪಾಲಿಸಿಲ್ಲ

ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ನೇಹಾ ಮನೆಗೆ ಆರ್‌.ಅಶೋಕ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಆರ್‌.ಅಶೋಕ, ಲವ್‌ ಜಿಹಾದ್‌ನಿಂದ ನೇಹಾ ಕೊಲೆಗೀಡಾಗಿದ್ದು, ಅವರಿಗೆ ನ್ಯಾಯ ಕೊಡಿಸುತ್ತೇನೆ. ಈ ಕುರಿತು ಸದನದಲ್ಲೂ ಮಾತನಾಡುತ್ತೇನೆ. ಬಸ್‌ ಟಿಕೆಟ್‌ನಿಂದ ಹಾರ ಹಾಕುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಹೆಣ್ಣುಮಕ್ಕಳನ್ನು ಕೊಂದು ಹಾರ ಹಾಕುವ ಬಗ್ಗೆ ಉತ್ತರ ನೀಡಲಿ ಎಂದರು.

ನೇಹಾ ಹತ್ಯೆ ತನಿಖೆಯಲ್ಲಿ ಪೊಲೀಸರು ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳದೆ ಜೈಲಿಗೆ ಕಳುಹಿಸಲಾಗಿದೆ. ತಪ್ಪಿಸಿಕೊಳ್ಳಲು ಪೊಲೀಸರೇ ಅವಕಾಶ ಮಾಡಿದ್ದಾರೆ. ಲವ್‌ ಜಿಹಾದ್‌ ಮುಚ್ಚಿಹಾಕಲು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೇಮಕ ಮಾಡಿಲ್ಲ, ಸಿಐಡಿಗೆ ಕೊಟ್ಟು ವಿಳಂಬ ಮಾಡಲಾಗಿದೆ. ಗಲ್ಲು ಶಿಕ್ಷೆ ವಿಧಿಸಲು ಸೂಕ್ತ ಸಾಕ್ಷಿಗಳು ಬೇಕು. ಅದಕ್ಕಾಗಿ ಸರಿಯಾದ ದಾಖಲೆಗಳನ್ನು ಸಂಗ್ರಹಿಸಬೇಕು. ಆರೋಪಿ ಯಾರ ಜೊತೆ ಏನು ಮಾತಾಡಿದ್ದಾನೆ ಎಂಬುದನ್ನು ತನಿಖೆ ಮಾಡಿ ಘಟನೆಗೆ ಕಾರಣರಾದವರನ್ನೂ ಬಂಧಿಸಬೇಕು. ಇವ್ಯಾವುದನ್ನೂ ಮಾಡದ ಪೊಲೀಸರು ಕೆಲವು ತಿಂಗಳು ಕಳೆದ ನಂತರ ಪ್ರಕರಣ ಮುಚ್ಚಿಹಾಕುವ ಅನುಮಾನವಿದೆ ಎಂದರು.