ವಿಜಯಪುರ: ಡಿ.ಕೆ.ಶಿವಕುಮಾರ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರುವುದಿಲ್ಲ. ಹೀಗಾಗಿ ಪ್ರಜ್ವಲ್ ಅಶ್ಲೀಲ ಪೆನ್ ಡ್ರೈವ್ ಪ್ರಕರಣ ಬಹಿರಂಗ ಮಾಡಿದ್ದಾಗಿ ಆರೋಪಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಪ್ರಕರಣದಲ್ಲೂ ಇದೇ ರೀತಿ ಆರೋಪಿಸಿದ್ದರು. ನೂರು ಬಾರಿ, ನೂರು ವಿಚಾರಗಳಲ್ಲೂ ಇದೇ ರೀತಿ ಹೇಳುತ್ತಾರೆ ಎಂದು ವಿಪಕ್ಷಗಳ ನಾಯಕರ ಹೇಳಿಕೆಗಳ ವಿರುದ್ಧ ಹರಿಹಾಯ್ದರು.
ರಾಕೇಶ ಸಿದ್ದರಾಮಯ್ಯ ಮೃತಪಟ್ಟಾಗ ಪ್ರಧಾನಿ ಮೋದಿ ಸಹಾಯ ಮಾಡಿರುವ ದಾಖಲೆ ಇದ್ದರೆ ಕುಮಾರಸ್ವಾಮಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ರಾಮಲಿಂಗಾರೆಡ್ಡಿ, ಪ್ರಜ್ವಲ್ ಪ್ರಕರಣ ಖಂಡಿಸುವಲ್ಲಿ ಬಿಜೆಪಿ ನಾಯಕರು ನೇಹಾ ಹತ್ಯೆಯ ಪ್ರಕರಣದಲ್ಲಿ ತೋರಿದ ಆಸಕ್ತಿ ತೋರುತ್ತಿಲ್ಲವೇಕೆ. ಇದೇ ಕೃತ್ಯ ಕಾಂಗ್ರೆಸ್ ಪಕ್ಷದವರಿಂದ ಆಗಿದ್ದರೆ ಬಿಜೆಪಿ ನಾಯಕರು ಬಾಯಿ ಬಡಿದುಕೊಂಡು ರಂಪಾಟ ಮಾಡುತ್ತಿದ್ದರು ಎಂದು ಕುಟುಕಿದರು.
ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಬಾಯಿ ಬಿಡದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದಲ್ಲಿ ಒಬ್ಬರು ತಪ್ಪು ಮಾಡಿದರೆ ಬುಲ್ಡೋಜರ್ ನಿಂದ ಮನೆ ಒಡೆಯುತ್ತಾರೆ. ಸಂಸದನನ್ನೇ ಗುಂಡಿಕ್ಕಿ ಕೊಂದರೂ ಅಮಿತ್ ಶಾ ಬಾಯಿ ಬಿಡಲಿಲ್ಲ ಎಂದು ಹರಿಹಾಯ್ದರು.