ಮನೆ ರಾಜಕೀಯ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ: ಬೈರತಿ ಬಸವರಾಜ್‌

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ: ಬೈರತಿ ಬಸವರಾಜ್‌

0

ಹೊಸಪೇಟೆ (ವಿಜಯನಗರ): ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆಂದು ಹೇಳಲಾಗಿರುವ ಲೈಂಗಿಕ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಸಿಐಡಿ ತನಿಖೆಯಿಂದ ವಾಸ್ತವ ಅಂಶ ಹೊರಬರುವ ವಿಶ್ವಾಸ ಇಲ್ಲ ಎಂದು ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಹೇಳಿದರು.

Join Our Whatsapp Group

ಇಲ್ಲಿ ಬುಧವಾರ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಜತೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಐಡಿ ತನಿಖೆಯಿಂದ ವಾಸ್ತವ ಹೊರಬರಲಾರದು ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ಸಂಶಯ ವ್ಯಕ್ತಪಡಿಸಿದ್ದರಲ್ಲಿ ಅರ್ಥವಿದೆ. ಹೀಗಾಗಿ ಸಿಬಿಐ ತನಿಖೆ ನಡೆಸಿದರೆ ಮಾತ್ರ ವಾಸ್ತವ ಹೊರಬರಲಿದೆ ಎಂಬುದು ಬಿಜೆಪಿಯ ನಿಲುವೂ ಆಗಿದೆ ಎಂದರು.

ಪ್ರಜ್ವಲ್ ಪ್ರಕರಣದಿಂದ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮತದಾರರು ಈಗಾಗಲೇ ಮೋದಿ ಅವರ ಕೈ ಬಲಪಡಿಸಲು ನಿರ್ಧರಿಸಿದ್ದಾರೆ. ಹೆಣ್ಣುಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಕೇಂದ್ರ ಗೃಹ ಸಚಿವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಬೈರತಿ ಬಸವರಾಜ್‌ ಹೇಳಿದರು.

ನೇಹಾ ಪ್ರಕರಣಕ್ಕೆ ಪ್ರಜ್ವಲ್‌ ಪ್ರಕರಣವನ್ನು ಹೋಲಿಸಲಾಗದು. ನೇಹಾ ಅವರನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದದ್ದನ್ನು ಇಡೀ ದೇಶ ನೋಡಿ ಬೆಚ್ಚಿಬಿದ್ದಿದೆ. ಲೈಂಗಿಕ ಹಗರಣದಲ್ಲಿ ಸಾವಿರಾರು ಮಹಿಳೆಯರಿಗೆ ಅನ್ಯಾಯ ಆಗಿರುವ ವಿಚಾರ ಇದೀಗ ತನಿಖೆಯ ಹಂತದಲ್ಲಿದೆ. ಸತ್ಯ ಹೊರಬಂದೇ ಬರುತ್ತದೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಅವರು ಹೇಳಿದರು.

ನರೇಂದ್ರ ಮೋದಿ ಅವರ 10 ವರ್ಷದ ಆಳ್ವಿಕೆಯಲ್ಲಿ ದೇಶ ಹಲವು ಕ್ಷೇತ್ರಗಳಲ್ಲಿ ಅದ್ಭುತ ಪ್ರಗತಿ ಕಂಡಿದೆ. ಹೊಸ ರೈಲು ಮಾರ್ಗಗಳು, ವಿಮಾನ ನಿಲ್ದಾಣಗಳು, ಕೋವಿಡ್‌ ನಂತರ ಎಲ್ಲಾ ಬಡವರಿಗೂ ಉಚಿತ ಅಕ್ಕಿ, ಬಿಪಿಎಲ್ ಕುಟುಂಬದ ಸದಸ್ಯರಿಗೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆ ಸಹಿತ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸಮರ್ಥ ಆಡಳಿತದಿಂದಾಗಿಯೇ ದೇಶ ಇಂದು ಜಗತ್ತಿನ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದೇ ಆಧಾರದಲ್ಲಿ ಮತ್ತೊಮ್ಮೆ ಮತ ಯಾಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಹಲವು ಸಮುದಾಯಗಳ ಅಭಿವೃದ್ಧಿಗೆ ಎನ್‌ಡಿಎ ಸರ್ಕಾರ ಶ್ರಮಿಸಿದೆ. ಶ್ರೀರಾಮುಲು ಅವರು ಸಹ ತಮಗೆ ಅವಕಾಶ ಸಿಕ್ಕಾಗಲೆಲ್ಲಾ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿಗೆ ಮತ ಹಾಕುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.

ಮೋದಿ ಸರ್ಕಾರದಿಂದಾಗಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿರುವುದಕ್ಕೆ ನಮ್ಮ ಕಣ್ಣೆದುರಲ್ಲೇ ಸಾಕ್ಷ್ಯ ಇದೆ. ಚಿತ್ರದುರ್ಗ–ಹೊಸಪೇಟೆ, ಹುಬ್ಬಳ್ಳಿ–ಹೊಸಪೇಟೆ, ಬಳ್ಳಾರಿ–ಹೊಸಪೇಟೆ ಹೆದ್ದಾರಿಗಳು ಮೇಲ್ದರ್ಜೆಗೆ ಏರಿರುವುದು ಮೋದಿ ಅವಧಿಯಲ್ಲಿ. ರೈಲ್ವೆಯಲ್ಲಿ ಅನೇಕ ಸುಧಾರಣೆಗಳು ಆಗಿರುವುದು, ಹಲವಾರು ಶಿಕ್ಷಣ ಸಂಸ್ಥೆಗಳು ಬಂದಿರುವುದು ಮೋದಿ ಅವಧಿಯಲ್ಲಿ. ಜನರಿಗೆ ಇದೆಲ್ಲವೂ ತಿಳಿದಿದೆ. ಅಭಿವೃದ್ಧಿ ಆಗಿಲ್ಲ ಎಂದು ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ ಎಂದು ಅಭ್ಯರ್ಥಿ ಬಿ.ಶ್ರೀರಾಮುಲು ತಿಳಿಸಿದರು.

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದಕ್ಕಾಗಿ ಸಮತೋಲಿತ ಜಲಾಶಯ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ₹1000 ಕೋಟಿ ತೆಗೆದಿರಿಸಿತ್ತು. ಈ ಸರ್ಕಾರ ಆ ದುಡ್ಡನ್ನು ಏನು ಮಾಡಿದೆಯೋ ಗೊತ್ತಿಲ್ಲ ಎಂದು ಅವರು ಟೀಕಿಸಿದರು.