ಮೈಸೂರು (Mysuru)-ಚಿನ್ನಾಭರಣ ಗಿರವಿ ಇಟ್ಟ ಗ್ರಾಹಕನಿಗೆ ಫೈನಾನ್ಸ್ ಬ್ಯಾಂಕ್ ವೊಂದು ವಂಚಿಸಿರುವ ಘಟನೆ ನಡೆದಿದೆ.
ಇಲವಾಲ ಹೋಬಳಿ ಹೊಸಕೋಟೆ ಗ್ರಾಮದ ಪ್ರವೀಣ್ ಎಂಬ ರೈತನಿಗೆ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವಂಚನೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರವೀಣ್ 2.50 ಲಕ್ಷ ರೂ. ಗೆ 77 ಗ್ರಾಂ ಚಿನ್ನಾಭರಣ ಗಿರವಿ ಇಟ್ಟಿದ್ದರು. ಗಿರವಿ ಇಟ್ಟ ಮೂರೇ ತಿಂಗಳಲ್ಲಿ ಬ್ಯಾಂಕ್ ನವರು ಚಿನ್ನಾಭರಣವನ್ನು ಹರಾಜು ಮಾಡಿದ್ದಾರೆ. ಚಿನ್ನಾಭರಣ ಹರಾಜು ಮಾಡುವ ಮುನ್ನ ನೋಟಿಸ್ ಸಹ ನೀಡಿಲ್ಲ.
ಬ್ಯಾಂಕ್ ನ ಕ್ರಮದ ಬಗ್ಗೆ ಪ್ರಶ್ನಿಸಿದ ಬಳಿಕ ಬೇರೆ ಆಭರಣ ನೀಡುವುದಾಗಿ ಹೇಳಿದ್ದ ಬ್ಯಾಂಕ್ ಸಿಬ್ಬಂದಿ 916 ಹಾಲ್ ಮಾರ್ಕ್ ಚಿನ್ನದ ಬದಲಾಗಿ 21 ಕ್ಯಾರೆಟ್ ಚಿನ್ನ ನೀಡಿ ವಂಚಿಸಿದ್ದರು.
ವಂಚನೆಯನ್ನು ವಿರೋಧಿಸಿ ರೈತ ಸಂಘದವರು ಪ್ರತಿಭಟನೆ ನಡೆಸಿದ ಬಳಿಕ ಎಚ್ಚೆತ್ತುಕೊಂಡಿರುವ ಬ್ಯಾಂಕ್ ನವರು 916 ಹಾಲ್ ಮಾರ್ಕ್ ಚಿನ್ನ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರ ಮಧ್ಯಸ್ಥಿಕೆಯಿಂದ ಪ್ರಕರಣ ಸುಖಾಂತ್ಯಗೊಂಡಿದೆ.